×
Ad

ಉದ್ಯೋಗ ಸೃಷ್ಠಿಗೆ ಒತ್ತು ನೀಡದ ಬಜೆಟ್: ಡಿವೈಎಫ್ಐ

Update: 2026-03-06 23:52 IST

ಲವಿತ್ರ ವಸ್ತ್ರದ್

ಕಲಬುರಗಿ: ಮುಖ್ಯಮಂತ್ರಿ ಮಂಡಿಸಿದ 4.48 ಲಕ್ಷ ಕೋಟಿ ರೂಪಾಯಿಯ 2026-27 ನೇ ಸಾಲಿನ ಆಯವ್ಯಯ (ಬಜೆಟ್) ದಲ್ಲಿ ಯುವಜನರಿಗೆ ಅತ್ಯಗತ್ಯವಿರುವ ಉದ್ಯೋಗ ಸೃಷ್ಠಿಸಿ, ಉದ್ಯೋಗ ಖಾತ್ರಿಗೊಳಿಸದೇ ಯುವಜನರಿಗೆ ನಿರಾಸೆಯನ್ನು ಮೂಡಿಸಿದ ಬಜೆಟ್ ಆಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಸಂಘಟನೆಯ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂಬ ಬಜೆಟ್ ನಲ್ಲಿರುವ ಅಂಶ ಕೇವಲ ಕಾಗದದ ಮೇಲಿನ ಘೋಷಣೆಯಾಗಿದೆ. ಲಕ್ಷಾಂತರ ಯುವಜನರು ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಈ ಪ್ರಸಕ್ತ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಉದ್ಯೋಗ ನೀತಿ ಜಾರಿಗೊಳಿಸಿ ಉದ್ಯೋಗ ಭರವಸೆ ನೀಡುತ್ತಾರೆಂದು ಭಾವಿಸಿದ್ದರು. ಆದರೆ ಯುವಕರ ನಿರೀಕ್ಷೆ ಹುಸಿ ಮಾಡಿದ್ದಾರೆ ಎಂದರು.

15 ಸಾವಿರ ಬೋಧಕ ಹುದ್ದೆಗಳನ್ನು ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದು ಒಳಗೊಂಡಂತೆ 56,432 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂಬ ಒಂದಂಶ ಹೊರತುಪಡಿಸಿದರೆ, ರಾಜ್ಯ ಸರಕಾರದಡಿ ಖಾಲಿಯಿರುವ 2.80 ಲಕ್ಷ ಹುದ್ದೆಗಳ ಭರ್ತಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ರಾಜ್ಯಕ್ಕೆ ಅಗತ್ಯವಿರುವ ಯುವ ನೀತಿಯನ್ನೂ ಕೂಡ ಜಾರಿ ಮಾಡಲು ಮುಂದಾಗಿಲ್ಲ ಎಂದು ದೂರಿದರು.

ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ 'ಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯ'ವನ್ನು ನಿಲ್ಲಿಸಲು 'ರೋಹಿತ್ ವೇಮುಲ ಕಾಯ್ದೆ'ಯನ್ನು ಜಾರಿಗೆ ತರುವುದನ್ನು ಸಂಘಟನೆ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಗಿಡ್ಡಮ್ಮ, ಶಾಂತಕುಮಾರ, ಸಾನಿಯಾ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News