ವಿಶ್ವ ಭಾವೈಕ್ಯತೆಯ ಭಾಷೆ ಕನ್ನಡ : ಸಂಸದ ಸಾಗರ್ ಖಂಡ್ರೆ
ಬೀದರ್ : ವಿಶ್ವ ಭಾವೈಕ್ಯತೆ ಭಾಷೆ ಕನ್ನಡವಾದರೆ ಕಾಯಕದ ಭೂಮಿ ಕರ್ನಾಟಕವಾಗಿದೆ ಎಂದು ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು.
ಶನಿವಾರ ಸಂಜೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಚಾಂದೂರ್ ಮೈಸಮ್ಮ ಸಾಮಾಜಿಕ ಸಾಂಸ್ಕೃತಿಕ ಹಾಗೂ ಕಲಾ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ರಾಜ್ಯ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸ್ವಾತಂತ್ರ್ಯವಾದ ಬಳಿಕ ಭಾಷವಾರು ಪ್ರಾಂತ, ರಾಜ್ಯ ರಚನೆಯಾಯಿತು. ಮುಂಬೈ, ಬೆಳಗಾವಿ, ಹೈದರಾಬಾದ್ ಮೈಸೂರು ಭಾಗವನ್ನು ಮೈಸೂರು ರಾಜ್ಯವೆಂದು ಘೋಷಣೆ ಮಾಡಲಾಯಿತು. 51 ವರ್ಷಗಳ ಹಿಂದೆ ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಭಾಷೆ ಮಾತನಾಡುವ ನಾಡನ್ನು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಉಮೇಶಕುಮಾರ್ ಸೋರಳ್ಳಿಕರ್ ಅವರು ಮಾತನಾಡಿ, ಬಹು ಗಡಿಗಳಿಂದ ಬಹು ಭಾಷೆ ಮಾತನಾಡುವ ಬೀದರ್ ಜಿಲ್ಲೆಯು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಸಿರಾಗಿಸಿಕೊಂಡು ಉಸಿರಾಗಿಸಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೊಂದಾಯಿತ ಸಂಘ ಸಂಸ್ಥೆಗಳಿಗೆ ಗಡಿಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಹಣ ನೀಡುವುದು ನಿಲ್ಲಿಸಿದೆ. ಆದರೆ ಹೊರರಾಜ್ಯದ ಕನ್ನಡ ಕಾರ್ಯಕ್ರಮಗಳಿಗೆ ಹಣ ನೀಡುತ್ತಿದೆ. ಇದು ಅಧಿಕಾರಿ ವರ್ಗದವರು ಮಾಡುತ್ತಿರುವ ತಾರತಮ್ಯವಾಗಿದ್ದು, ಇದನ್ನು ಸರಿಪಡಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024-25 ಮತ್ತು 2025-2026 ನೇ ಸಾಲಿಗೆ ಅರ್ಜಿ ಕರೆಯಬೇಕು. ನಾಡಿನಲ್ಲಿ ಪ್ರತಿನಿತ್ಯ ಕನ್ನಡಕ್ಕಾಗಿ ದುಡಿಯುತ್ತಿರುವ ಸಂಘ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ತಿಳಿಸಿದರು.
ಶಿವಶರಣಪ್ಪ ಹುಗ್ಗೆ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸರಿಗಮಪದ ಖ್ಯಾತಿ ರೇವಣಸಿದ್ದ ಪೂಲಾರಿ ಅವರು ತಮ್ಮ ಮಧುರವಾದ ಕಂಠದಿಂದ ಹಾಡು ಹಾಡಿದರು, ಮಿಲಿಂದಕುಮಾರ್ ಕಾಂಬಳೆ, ಆಕಾಶ್, ಶ್ರೀಕಾಂತ್ ಸಿತಾರ್, ಚಂದ್ರಕಾಂತ್ ಸಿಂಘೆ ಹಾಗೂ ಶಿವಾನಿ ವಜ್ರೇಶ್ ಅವರು ಭರತ ನಾಟ್ಯ ಮಾಡಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟಿಯಾರಾದ ದಿವ್ಯಶ್ರೀ, ಪೂಜಾ ರಾಮಚಂದ್ರ, ನಟರಾದ ಶಿವರಾಜ್ ಯಾದವ್, ಜೈ ಸಿದ್ದಾರ್ಥ, ನಗರ ಸಭೆ ಸದಸ್ಯ ದಿಗಂಬರ್ ಮಡಿವಾಳ್, ಶಶಿಕುಮಾರ್ ಪೊಲೀಸ್ ಪಾಟೀಲ್, ವಿಲಾಶರಾವ್ ಮೋರೆ, ಚಂದ್ರಕಾಂತ್ ನಿರಾಠೆ, ಬಾಬು ಆಣದೂರೆ, ವಿನೊದ್ ಅಪ್ಪೆ, ಜಿಲ್ಲಾ ಸಂಚಾಲಕ ಬಾಬು ಕೌಠ, ಚಂದೂರ ಮೈಸಮ್ಮ ಸಾಮಾಜಿಕ ಸಾಂಸ್ಕೃತಿಕ ಹಾಗೂ ಕಲಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಗಜಸೂರ್ಯ ಹಾಗೂ ಡಾ.ಸುಬ್ಬಣ್ಣ ಕರಕನಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದರು.