×
Ad

ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡರೆ ಕಾನೂನು ಕ್ರಮ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Update: 2025-06-12 21:31 IST

ಬೀದರ್ : ಜಿಲ್ಲೆಯಲ್ಲಿ ಯಾವುದೇ ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಒಂದು ವೇಳೆ ನೇಮಿಸಿಕೊಂಡಿರುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಹೇಳಿದರು.

ಇಂದು ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯವನ್ನು ಕಸಿದಿಕೊಳ್ಳುತ್ತದೆ. ವಿದ್ಯಾರ್ಥಿ, ಶಿಕ್ಷಕ ಮತ್ತು ನಾಗರಿಕರಿಗೆ ಬಾಲಕಾರ್ಮಿಕರು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ತಿಳಿಸಬೇಕು ಎಂದರು.

14 ವರ್ಷದೊಳಗಿನ ಮಕ್ಕಳು ಬಾಲ ಕಾರ್ಮಿಕರು ಮತ್ತು 14 ರಿಂದ 18 ವರ್ಷದೊಳಗಿನ ಮಕ್ಕಳು ಕಿಶೋರ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ 1986 ರ ಬಾಲಕಾರ್ಮಿಕ ನಿಷೇಧ ಕಾಯ್ದೆ ಪ್ರಕಾರ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧ ಮತ್ತು ಕಿಶೋರ ಕಾರ್ಮಿಕರನ್ನು ಯಾವುದೇ ಅಪಾಯಕಾರಿ ಕೆಲಸಗಳಲ್ಲಿ ನೇಮಿಸಿಕೊಳ್ಳುವುದು ಕಾನೂನಾತ್ಮಕ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಂವಿಧಾನದ 21ಎ ವಿಧಿಯ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದು ತಿಳಿಸುತ್ತದೆ. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲಾಗುತ್ತದೆ. ಬಾಲಕಾರ್ಮಿಕರು ಕಂಡು ಬಂದಲ್ಲಿ ಅಂತಹವರನ್ನು ನೇರವಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಿ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ಮಾತನಾಡಿ, 14 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಹೊಟೇಲ್, ಗ್ಯಾರೇಜ್, ಧಾಭಾ ಮತ್ತು ಸಣ್ಣ ಗುಡಿ ಕೈಗಾರಿಕೆಗಳಲ್ಲಿ ಕಂಡು ಬರುತ್ತಾರೆ. ಅದಕ್ಕೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ಬಡತನ, ಕೌಟುಂಬಿಕ ಕಲಹ, ಮಕ್ಕಳಿಗೆ ಪೋಷಕರು ಇಲ್ಲದೆ ಇರುವುದು ಇತ್ಯಾದಿಗಳಾಗಿವೆ. ಆದರೆ ನಾವು ಅವರಿಗೆ ಬಾಲಕಾರ್ಮಿಕ ಪದ್ಧತಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನಾತ್ಮಕ ಅಪರಾಧವಾಗಿದೆ. ಆದರೂ ಕೂಡ ಬಾಲಕಾರ್ಮಿಕ ಪದ್ಧತಿ ಕಂಡು ಬರುವುದು ವಿಷಾದದ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆಯನ್ನು ಬಾಲಕಾರ್ಮಿಕ ಪದ್ಧತಿ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಮತ್ತು ಮಕ್ಕಳಿಗೆ ಬಾಲ್ಯವನ್ನು ಆಟ, ಪಾಠಗಳ ಜೊತೆಗೆ ಕಳೆಯಲು ಬಿಡಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಈ ಕೆಲಸ ಕೇವಲ ಅಧಿಕಾರಿಗಳು ಅಷ್ಟೇ ಅಲ್ಲದೇ ಪೋಷಕರು, ನಾಗರಿಕರು ಕೂಡ ಇವುಗಳನ್ನು ತಡೆಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾ.ಅಂಜನಾ ಕುಲಕರ್ಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸನ್ಮುಖಯ್ಯಾ ಬಿ.ಸ್ವಾಮಿ, ಕಾರ್ಯದರ್ಶಿ ಧನರಾಜ್ ಬಿರಾದಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ್ ಲಕ್ಷ್ಮಣ ಕುಳಲಿ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಸೀಮಪ್ಪಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ್ ಹಾಗೂ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಅನಿಲ್ ಪಸರ್ಗೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News