ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ : ಸಚಿವ ಈಶ್ವರ್ ಖಂಡ್ರೆ
ಬೀದರ್: ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಪೀಠಿಕೆಯನ್ನು ಬೋಧಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಸಂವಿಧಾನ ನಮಗೆ ಎಲ್ಲಾ ರೀತಿಯ ಸ್ವಾತಂತ್ರ್ಯ, ಹಕ್ಕುಗಳು ನೀಡುವುದರ ಮೂಲಕ ಪ್ರತಿಯೊಬ್ಬರು ಸಮಾಜದಲ್ಲಿ ಸಮಾನರಾಗಿ ಬಾಳುವಂತೆ ಹಾಗೂ ವ್ಯಕ್ತಿ ಗೌರವ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಸೇರಿದಂತೆ ಇತರೆ ಎಲ್ಲಾ ರೀತಿಯ ಸಮಾನ ಅವಕಾಶ ಹಾಗೂ ಮತದಾನದ ಹಕ್ಕು, ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದೆ ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರಯ ಸಿಕ್ಕ ಮೇಲೆ ನಮ್ಮದೇ ಆದ ಕಾನೂನು ರೂಪಿಸುವ ಸಂವಿಧಾನ ಇರಲಿಲ್ಲ. 1950ಮ ಜ.26ರಂದು ಸಂವಿಧಾನ ಜಾರಿಗೆ ಬಂದ ಮೇಲೆ ಒಂದು ಪರಿಪೂರ್ಣ ರಾಷ್ಟ್ರವಾಗಿ ಹೊರಹೊಮ್ಮಿತು. 1946ರಲ್ಲಿ ಮೊದಲ ರಚನಾ ಸಭೆ ನಡೆಯಿತು. ನಂತರ 1947 ಆ.29ರಂದು ಸಂವಿಧಾನ ಕರಡು ಸಮಿತಿ ರಚಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಜಗತ್ತಿನ ಶ್ರೇಷ್ಠ ಮತ್ತು ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಮಹಾ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ನೀಡುವಲ್ಲಿ ಮತ್ತು ಯಾರು ಮೇಲು ಕೀಳು ಎನ್ನದೇ ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಹೊಂದಿದರು ಕೂಡ ಎಲ್ಲರೂ ಒಂದೇ ಎಂದು ಐಕ್ಯ ಸಾರುವ ಸಂವಿಧಾನ ನಮ್ಮದಾಗಿದೆ ಎಂದು ಸಚಿವರು ಹೇಳಿದರು.
ಬೀದರ್ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ ಅತಿಥಿ ಉಪನ್ಯಾಸ ನೀಡಿದರು.
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಅಧ್ಯಕ್ಷ ಬಾಬು ಹೊನ್ನನಾಯ್ಕ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತ ರಾವ್ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ , ಗೋವಿಂದ ಸ್ವಾಮಿ, ಭಂತೆ ಜ್ಞಾನಸಾಗರ, ಧಮ್ಮಕಿರ್ತ, ಅನಿಲ ಬೆಲ್ದಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.