ಬೀದರ್ ಜಿಲ್ಲೆಯು ಮಾದಕ ಮುಕ್ತ ಜಿಲ್ಲೆಯಾಗಿಸಲು ಎಲ್ಲರೂ ಶ್ರಮಿಸೋಣ : ಸಂಸದ ಸಾಗರ್ ಖಂಡ್ರೆ
ಬೀದರ್ : ಜಿಲ್ಲೆಯನ್ನು ಮಾದಕ ಮುಕ್ತ ಜಿಲ್ಲೆಯಾಗಲು ಎಲ್ಲರೂ ಶ್ರಮಿಸೋಣ ಎಂದು ಸಂಸದ ಸಾಗರ್ ಖಂಡ್ರೆ ಅವರು ತಿಳಿಸಿದರು.
ಸೋಮವಾರ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ-ಕರ್ನಾಟಕ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಾದಕ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ವ್ಯಸನ ಒಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಆದ್ದರಿಂದ ಇದನ್ನು ಹೋಗಲಾಡಿಸಲು ನಾವೆಲ್ಲರೂ ಕೈಜೋಡಿಸಬೇಕು. ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಭವಿಷ್ಯ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಮನೆ ಮನೆಗಳಲ್ಲಿ, ಶಾಲಾ, ಕಾಲೇಜುಗಳಲ್ಲಿ ತಿಳಿಸಿ ಹೇಳಬೇಕು. ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮನೆಗಳಲ್ಲಿ ಪೋಷಕರು ಮಕ್ಕಳ ಬಗ್ಗೆ ವಿಶೇಷ ಗಮನ ವಹಿಸಿ, ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ಮಾತನಾಡಿ, ಮಾದಕ ಮುಕ್ತ ಜಿಲ್ಲೆ ಮಾಡಲು ನಾವು ಮನೆಯಿಂದಲೇ ಕೆಲಸ ಆರಂಭಿಸಬೇಕು. ಯುವ ಪೀಳಿಗೆಯನ್ನು ಮಾದಕ ವಸ್ತುಗಳಿಂದ ದೂರ ಇಟ್ಟರೆ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಬಹುದು. ಈಗಾಗಲೇ ಜಿಲ್ಲೆಯಲ್ಲಿ ಆ. 1 ರಿಂದ ಸೆ.30ರ ವರೆಗೆ ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿಯಲ್ಲಿ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಮನೋವೈದ್ಯ ತಜ್ಞ ರಾಘವೇಂದ್ರ ವಾಗೋಲೆ ಅವರು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಇದೇ ವೇಳೆ ಮಾದಕ ಮುಕ್ತದ ಧ್ಯೇಯ ಬೋಧನೆ ಹಾಗೂ ಕರಪತ್ರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸೂರ್ಯಕಾಂತ್ ಬೀರಾದರ್, ಎನ್ ಆರ್ ಎಲ್ ಎಂ ಮ್ಯಾನೇಜರ್ ಪ್ರವೀಣಕುಮಾರ್, ಎನ್ ಆರ್ ಎಲ್ ಎಂ ಅಧಿಕಾರಿ ಸುಭಾಷ್ ಸೇರಿದಂತೆ ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು ಇತರರು ಉಪಸ್ಥಿತರಿದ್ದರು.