ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ಬದ್ಧರಾಗೋಣ : ಸಚಿವ ಈಶ್ವರ್ ಖಂಡ್ರೆ
70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ
ಬೀದರ್ : ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧರೋಗೋಣ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಇಂದು ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿರಿಮೆಯು ತುಂಬಾ ವೈಶಿಷ್ಟ್ಯತೆಗಳಿಂದ ಕೂಡಿದೆ. ರಾಜ ಮಹಾರಾಜರು ಸಹ ತಮ್ಮ ಆಡಳಿತದ ಕಾಲಾವಧಿಯಲ್ಲಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಕಾಲ ಇತಿಹಾಸ ಇದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದು ಬೀದರ್ ಜಿಲ್ಲೆಗೆ ಅತ್ಯಂತ ಹೆಚ್ಚು ಒಪ್ಪುತ್ತದೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ ಬಸವಕಲ್ಯಾಣ, ಗುರುದ್ವಾರ, ಮುಹಮ್ಮದ್ ಗವಾನರ ಮದರಸಾ, ಝರಣಿ ನರಸಿಂಹ ಸ್ವಾಮಿ, ಪಾಪನಾಶಿ ದೇವಾಲಯವೂ ಇದ್ದಾವೆ. ಇಲ್ಲಿ ಹಿಂದು, ಮುಸ್ಲಿಂ, ಸಿಖ್, ಇಸಾಯಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಅನ್ಯ ಭಾಷೆಯ ಪ್ರಭಾವದ ನಡುವೆಯೂ ಬೀದರ್ ಜಿಲ್ಲೆಯಲ್ಲಿ ಕನ್ನಡ ಉಳಿದು ಬೆಳೆದಿದೆ ಎಂದು ಹೇಳಿದರು.
ನಮ್ಮ ಬೀದರ್ ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇದೆ. ನಾವು ಈ ಕಳಂಕವನ್ನು ತೊಡೆದು ಹಾಕಿ ಕರುನಾಡ ಕಿರೀಟ ಬೀದರ್ ಮುಂದುವರಿದ ಜಿಲ್ಲೆ, ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು. ಅದಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಬೇಕು ಎಂದು ನುಡಿದರು.
ಕರ್ನಾಟಕದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜೀವನ ಪದ್ಧತಿ ಇದೆ. ಭಾವೈಕ್ಯತೆಯ ನಾಡಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಸರ್ವಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆ ಮಾಡಿದೆ. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಏಕೀಕರಣ ಚಳವಳಿಯಲ್ಲಿ ರಾಜ್ಯದ ಹಲವಾರು ಶ್ರಮಿಸಿದ್ದಾರೆ ಎಂದರು.
ಕನ್ನಡಿಗರು ಆಕ್ರಮಣಕಾರಿಗಳಲ್ಲ. ಹೀಗಾಗಿ ಅನೇಕ ವಿಷಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ, ಕಳಸಾ ಬಂಡೂರಿ, ಗೋಧಾವರಿ ಅಲ್ಲದೇ ಗಡಿ ವಿವಾದವನ್ನು ಕೆಲವರು ಸ್ವಾರ್ಥಕ್ಕಾಗಿ ಜೀವಂತ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೀದರ ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮುಖ್ಯಮಂತ್ರಿಗಳು ಕೂಡ ವೈಮಾನಿಕ ಸಮೀಕ್ಷೆ ನಡೆಸಿ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹೊರತುಪಡಿಸಿ ಹೆಚ್ಚುವರಿಯಾಗಿ 8,500 ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಜಿಲ್ಲಾಡಳಿತ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ನಿಯಮಾವಳಿಯಂತೆ ಸಮೀಕ್ಷೆ ನಡೆಸಿದ್ದು, ಒಟ್ಟು 1.69 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 300 ಕೋಟಿವರೆಗೆ ಪರಿಹಾರ ನೀಡಲಾಗುವುದು. ಈಗಾಗಲೇ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಅಡಿ 143 ಕೋಟಿ ರೂ. ನಲ್ಲಿ ಪ್ರಥಮ ಹಂತವಾಗಿ 70 ಕೋಟಿ ರೂ. ಹಣವನ್ನು 1 ಲಕ್ಷ ರೈತರ ಖಾತೆಗೆ ಜಮಾ ಆಗಲಿದೆ. ಉಳಿದ ಹಣವನ್ನು ಹಂತ ಹಂತವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ವಸತಿ ಶಾಲೆಗಳು, ವಸತಿ ನಿಲಯಗಳು, ಆರೋಗ್ಯ ಕೇಂದ್ರಗಳು, ಸಣ್ಣ ನೀರಾವರಿ, ಸಣ್ಣ ಮತ್ತು ಗುಡಿ ಕೈಗಾರಿಕೆ ಸೇರಿದಂತೆ ಎಲ್ಲಾ ಇಲಾಖೆಗಳ ಸರ್ವಾಂಗೀಣ ಅಭಿವೃದ್ಧಿ ಕೆಲಸ ಮಾಡಲಾಗುವುದು. ಉತ್ತಮ ಶಿಕ್ಷಣ ಪಡೆದು, ನಾಡಿನ ಏಳಿಗೆಗೆ ಶ್ರಮಿಸೋಣ ಹಾಗೂ ಕನ್ನಡವನ್ನು ನಿತ್ಯ ಜೀವನದಲ್ಲಿ ಬಳಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಮಹಾನಗರ ಪಾಲಿಕೆಯ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಮಹಾನಗರ ಪಾಲಿಕೆಯ ಆಯುಕ್ತೆ ರಮ್ಯಾ ರಂಗನಾಥ್ ಹಾಗೂ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.