ಔರಾದ್ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಔರಾದ್: ಸಾಹಿತ್ಯ-ಸಂಸ್ಕೃತಿಯ ಸಂಭ್ರಮಕ್ಕೆ ವೇದಿಕೆಯಾಗಲಿರುವ ಔರಾದ್ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಶಶೀಲ್ ಜಿ.ನಮೋಶಿ, ಫೆ.4ರಂದು ಗಡಿ ತಾಲೂಕಿನಲ್ಲಿ ನಡೆಯಲಿರುವ ಸಮ್ಮೇಳನವು ಮಾದರಿಯಾಗುವ ರೀತಿಯಲ್ಲಿ ರೂಪಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ನಾಡಿನ ಭಾಷೆ, ಜನಪದ ಪರಂಪರೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಜೀವಾಳವಾಗಿವೆ. ಈ ಹಿನ್ನಲೆಯಲ್ಲಿ ಔರಾದ್ ಸಾಹಿತ್ಯ ಸಮ್ಮೇಳನವು ಹೊಸ ಚಿಂತನೆ, ವಿನೂತನ ಕಾರ್ಯಕ್ರಮಗಳು ಮತ್ತು ಸಾಹಿತ್ಯಾಸಕ್ತರ ವಿಶಾಲ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, ಔರಾದ್ ತಾಲೂಕಿನ ಏಳನೇ ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗುವ ರೀತಿಯಲ್ಲಿ ಯಶಸ್ವಿಗೊಳಿಸೋಣ. ಈಗಾಗಲೇ ಶೇ.70ರಷ್ಟು ಸಮ್ಮೇಳನದ ಸಿದ್ಧತೆ ಮಾಡಲಾಗಿದೆ. ಆಹ್ವಾನ ಪತ್ರಿಕೆ ಸಿದ್ದಗೊಳ್ಳುತ್ತಿದೆ. ಸಮ್ಮೇಳನದ ವಿವಿಧ ಸಮಿತಿಗಳು ರಚನೆಯಾಗಿದ್ದು, ಆಯಾ ಸಮಿತಿಗಳನ್ನು ಹಂಚಿಕೆ ಮಾಡಲಾಗಿದೆ. ಸಮ್ಮೇಳನ ನಡೆಯುವ ಸ್ಥಳ ಗೊತ್ತು ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಪೂರ್ವಭಾವಿ ಎರಡು ಸಭೆ ಮಾಡಲಾಗಿದ್ದು, ಶಾಸಕ ಪ್ರಭು ಚವ್ಹಾಣ ಅವರನ್ನು ಸರ್ವಾನುಮತದಿಂದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಎಸ್.ಜಿ ಸುರೇಶ್, ಬಿಇಒ ಬಿ.ಜೆ ರಂಗೇಶ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಶಿವಾನಂದ್ ಮೊಕ್ತೆದಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ನಿರ್ಮಳೆ, ಎಸ್ಸಿ ಎಸ್ಟಿ ನೌಕರರ ಸಂಘದ ತಾಲೂಕಾಧ್ಯಕ್ಷ ರಾಜಕುಮಾರ್ ಡೋಂಗರೆ, ಗುರುನಾಥ್ ದೇಶಮುಖ್, ಸಂಜೀವ ಕುಮಾರ್ ಶೇಟಕಾರ್, ಬಸವರಾಜ್ ಶೆಟಕಾರ್, ಮಹಾದೇವ್ ಚಿಟಗೀರೆ, ಅಶೋಕ್ ಶೆಂಬೆಳ್ಳಿ, ಅಂಬಾದಾಸ್ ನಳನೆ, ಸಂಜುಕುಮಾರ್ ಬಿರಾದಾರ್, ಮಹಾದೇವ್ ಶಿಂಧೆ, ಫೈಯಾಝ್, ಲೋಕೇಶ್, ರಾಜಕುಮಾರ್ ಹಲ್ಮಡಗೆ ಹಾಗೂ ರವಿ ಡೋಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.