×
Ad

2026ರ ಮೇ ತಿಂಗಳಲ್ಲಿ ಅನುಭವ ಮಂಟಪದ ಲೋಕಾರ್ಪಣೆಯ ಸಿದ್ಧತೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

Update: 2025-07-07 21:41 IST

ಬೀದರ್ : ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪವು 2026ರ ಮೇ ತಿಂಗಳ ಒಳಗಾಗಿ ಲೋಕಾರ್ಪಣೆಗೊಳಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನೂತನ ಅನುಭವ ಮಂಟಪ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನುಭವ ಮಂಟಪಕ್ಕೆ ಸರ್ಕಾರವು 742 ಕೋಟಿ ರೂ. ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿಯ ಗುಣಮಟ್ಟವನ್ನು ಜಾಗರೂಕತೆ ವಹಿಸಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

12ನೇ ಶತಮಾನದ ಶರಣರ ಅನುಭವ ಮಂಟಪ, ಸಂಸತ್ತು ಇಡೀ ದೇಶಕ್ಕೆ ಮಾತ್ರವಲ್ಲದೇ ವಿಶ್ವಕ್ಕೆ ಮಾದರಿಯಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಅನುಭವ ಮಂಟಪ ಯೋಜನೆಯು ಜಾಗತಿಕ ಮಟ್ಟದ ಸ್ಮಾರಕವಾಗಲಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ತೊಡಕು ಬಾರದಂತೆ ಅಧಿಕಾರಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಮುಂಜಾಗೃತೆ ವಹಿಸಬೇಕು. ಇಲ್ಲಿವರೆಗೆ ನೆಲಮಹಡಿ ಸೇರಿ 5 ಅಂತಸ್ತಿನ ಕಟ್ಟಡಗಳು ಪೂರ್ಣಗೊಂಡಿದ್ದು ಒಟ್ಟು 271 ಕೋಟಿ ರೂ. ಖರ್ಚಾಗಿದೆ. ಭೌತಿಕವಾಗಿ ಶೇ.63ರಷ್ಟು ಪ್ರಗತಿಯಾಗಿದೆ. ಅನುಭವ ಮಂಟಪದ ಪ್ರಗತಿ ಕುರಿತು ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

770 ಶರಣರ ವಚನಗಳು 770 ಕಂಬಗಳಲ್ಲಿ ಕೆತ್ತುವಾಗ ವಚನ ಹಾಗೂ ಚರಿತ್ರೆಯ ಅಕ್ಷರಗಳ ಕೆತ್ತನೆಯಲ್ಲಿ ತಪ್ಪು ಆಗದಂತೆ ಮುಂಜಾಗೃತೆ ವಹಿಸಬೇಕು. ಪ್ರತಿಯೊಬ್ಬ ಶರಣರ ವಚನಗಳು ವಿದ್ವಾಂಸರಿಂದ ಪರಿಶೀಲಿಸಬೇಕು. ವಚನಗಳ ಸ್ವಷ್ಟತೆ, ಶರಣರ ಹೆಸರು, ಕಾಯಕದ ವಿವರಗಳು ಕೂಡ ನುರಿತ ತಜ್ಞರ ಸಮಿತಿಯಿಂದ ಅನುಮೋದಿಬೇಕು. ಮಕ್ಕಳಿಗೆ, ಯುವಕರಿಗೆ, ಜನಸಾಮಾನ್ಯರಿಗೆ ಅರ್ಥವಾಗುವ ಮಹತ್ವದ ವಚನಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಸೂಚನೆ ನೀಡಿದರು.

ಬಸವಕಲ್ಯಾಣದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ತಾವು ಇತ್ತೀಚೆಗೆ ಬಸವಕಲ್ಯಾಣಕ್ಕೆ ಭೇಟಿ ನೀಡಿದಾಗ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಕಂಡು ಬಂದಿದ್ದು, ರಸ್ತೆಗೆ ಕೆ ಕೆ ಆರ್ ಡಿ ಬಿ ದಲ್ಲಿ ಅನುದಾನ ಒದಗಿಸಲಾಗುವುದು ಎಂದರು.

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಡಾ.ಈಶ್ವರ್ ಉಳ್ಳಾಗಡ್ಡಿ ಹಾಗೂ ಬಿಕೆಡಿಬಿ ಆಯುಕ್ತ ಜಗನ್ನಾಥ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News