ದಲಿತರಿಗೆ ಸೂಕ್ತ ರಕ್ಷಣೆ ನೀಡಲು ಸಚಿವ ಈಶ್ವರ್ ಖಂಡ್ರೆ ಸೂಚನೆ
ಈಶ್ವರ್ ಖಂಡ್ರೆ
ಬೀದರ್ : ಜಿಲ್ಲೆಯ ಕೆಲವು ಕಡೆ ದಲಿತರ ಮೇಲೆ ಹಲ್ಲೆ ನಡೆದಿದೆ ಎಂಬ ದೂರುಗಳು ಬಂದಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯು ನೊಂದವರಿಗೆ ತಕ್ಷಣವೇ ಸೂಕ್ತ ರಕ್ಷಣೆ ನೀಡಬೇಕು. ಹಾಗೆಯೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ ಅವರು ಸೂಚನೆ ನೀಡಿದ್ದಾರೆ.
ಭಾಲ್ಕಿ ತಾಲ್ಲೂಕಿನ ಖುದಾವಂದಪುರದಲ್ಲಿ ನಡೆದಿರುವ ಅಹಿತಕರ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಶಾಂತಿಗೆ ಭಂಗ ತರುತ್ತವೆ. ಈ ನಿಟ್ಟಿನಲ್ಲಿ ಕೂಡಲೇ ಭಾಲ್ಕಿ ತಾಲ್ಲೂಕಿನ ಖುದಾವಂದಪುರ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮತ್ತು ಘಟನೆಗೆ ಕಾರಣರಾದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸರ್ವ ಜನಾಂಗಕ್ಕೂ ಲೇಸು ಬಯಸಿದ ಸಮ ಸಮಾಜದ ನಿರ್ಮಾತೃ ವಿಶ್ವಗುರು ಬಸವಣ್ಣನವರು ಮತ್ತು ವಂಚಿತರಿಗೆ, ಶೋಷಿತರಿಗೆ, ದುರ್ಬಲರಿಗೆ ಸಂವಿಧಾನದ ಮೂಲಕ ಧ್ವನಿ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ಅವರು ನೋವು ವ್ಯಕ್ತಪಡಿಸಿದ್ದಾರೆ.