ಪ್ರವಾಹ ಪೀಡಿತ ಗ್ರಾಮಗಳಿಗೆ ಸಚಿವ ಈಶ್ವರ್ ಖಂಡ್ರೆ ಭೇಟಿ
ಬೀದರ್ : ಭಾಲ್ಕಿ ತಾಲೂಕಿನ ಮಾಂಜ್ರಾ ನದಿ ತೀರದಲ್ಲಿ ಅತಿವೃಷ್ಟಿಗೆ ಒಳಗಾದ ಹಳ್ಳಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಧವಾರ ಭಾಲ್ಕಿ ತಾಲೂಕಿನ ಸಾಯಿಗಾಂವ್, ಮೇಹಕರ್, ಹಲ್ಸಿ ತೂಗಾವ್, ವಾಂಜೆರ್ಖೇಡ್, ಕೊಂಗಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ತುರ್ತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸಂಕಷ್ಟದಲ್ಲಿರುವ ರೈತ ಬಾಂಧವರಿಗೆ ಸರ್ಕಾರದಿಂದ ಹೆಚ್ಚುವರಿ 8,500 ರೂ. ಪರಿಹಾರ ಸೇರಿದಂತೆ ಒಟ್ಟು ಖುಷ್ಕಿ ಜಮೀನಿಗೆ 17 ಸಾವಿರ ರೂ., ನೀರಾವರಿ ಜಮೀನಿಗೆ 25 ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 31 ಸಾವಿರ ರೂ. ಪರಿಹಾರ ಒದಗಿಸಲಾಗುವುದು ಎಂದರು.
ದೀಪಾವಳಿ ಹಬ್ಬದೊಳಗಾಗಿ ರೈತ ಬಾಂಧವರಿಗೆ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.