×
Ad

ಔರಾದ್ ತಾಲ್ಲೂಕಿನ ಎಲ್ಲ ಕೆರೆಗಳ ದುರಸ್ತಿಗೆ ಅನುದಾನ ನೀಡಲು ಶಾಸಕ ಪ್ರಭು ಚೌವ್ಹಾಣ್ ಒತ್ತಾಯ

Update: 2025-08-30 18:08 IST

ಔರಾದ್ : ಧಾರಾಕಾರ ಮಳೆಗೆ ಔರಾದ್ ತಾಲ್ಲೂಕಿನಲ್ಲಿ ಹಲವು ಕೆರೆಗಳು ಹಾಳಾಗಿವೆ. ಬೋಂತಿ ತಾಂಡಾ‌ ವ್ಯಾಪ್ತಿಯಲ್ಲಿ ಒಡೆದ ಇಂಗು ಕೆರೆಯ ಪುನಶ್ಚೇತನಕ್ಕಾಗಿ ಸರಕಾರ 1.50 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಿದೆ. ಇದೆ ರೀತಿ ತಾಲ್ಲೂಕಿನ ಎಲ್ಲ ಕೆರೆಗಳ ಪುನಶ್ಚೇತನಕ್ಕೆ ಅನುದಾನ ನೀಡಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್.ಎಸ್.ಬೋಸರಾಜು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಕ್ಷೇತ್ರದಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಮನವಿಗೆ ಸ್ಪಂದಿಸಿ ಸಂಪೂರ್ಣವಾಗಿ ಒಡೆದಿರುವ ಬೋಂತಿ ತಾಂಡಾ ಕೆರೆಯ ಪುನರ್ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದಾರೆ. ಅವರಿಗೆ ನನ್ನ ಕ್ಷೇತ್ರದ ಮಹಾಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಆ.17 ಮತ್ತು 18ರಂದು ಸುರಿದ ಧಾರಾಕಾರ ಮಳೆಗೆ ಬೋಂತಿ ತಾಂಡಾ‌, ಬಾವಲಗಾಂವ್, ಅಕನಾಪೂರ್, ನಂದಿ ಬಿಜಲಗಾಂವ್, ಮುತಖೇಡ, ಕಾಳಾಪಟ್ಟಿ ತಾಂಡಾ, ಚಿಕ್ಲಿ(ಯು), ನಂದಿನಾಗೂರ್, ಭಂಡಾರಕುಮಟಾ, ಕರಂಜಿ(ಬಿ), ದಾಬಕಾ, ಖೇರ್ಡಾ, ಚೊಂಡಿಮುಖೇಡ್, ಖೇಮಾ ನಾಯಕ್ ತಾಂಡಾ, ಹೊಳಸಮುದ್ರ ಸೇರಿದಂತೆ ಎಲ್ಲ ಕೆರೆ, ಸೇತುವೆಗಳಿಗೆ ಹಾನಿಯಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಈ ಬಾರಿ ಸಾಕಷ್ಟು ಮಳೆಯಾದರೂ ಕೂಡ ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗುವ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.

ಸರಕಾರ‌ ಒಂದು ಕೆರೆಯ ಪುನಶ್ಚೇತನಕ್ಕೆ ಅನುದಾನ ನೀಡಿದ್ದು, ಉಳಿದ ಎಲ್ಲ ಕೆರೆ, ಸೇತುವೆಗಳ ದುರಸ್ತಿ ಮತ್ತು ಪುನಶ್ಚೇತನ ಕೆಲಸ‌‌‌ ಆರಂಭಿಸುವುದು ಅತ್ಯಂತ ಅವಶ್ಯಕವಾಗಿದೆ. ಇಲಾಖೆಯಿಂದಲೂ ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಕನಿಷ್ಠ 20 ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಳೆಯಿಂದಾಗಿ ಈಗಾಗಲೇ ಹಲವು ಕೆರೆಗಳು ಹಾನಿಯಾಗಿ ಅಪಾರ ಪ್ರಮಾಣದ ನಷ್ಟವಾಗಿದೆ. ಅಧಿಕಾರಿಗಳು ಇರುವ ಕೆರೆಗಳನ್ನು ಸಂರಕ್ಷಿಸಲು ಆದ್ಯತೆ ಕೊಡಬೇಕು. ಇಲಾಖೆಯಿಂದ ಎಲ್ಲ ಕೆರೆಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News