×
Ad

ಕನ್ನಡ ಚಿತ್ರಗಳಿಗೆ ಜಾಗತಿಕ ವೇದಿಕೆ ಕಲ್ಪಿಸಲು ಶೀಘ್ರ ಒಟಿಟಿ ಸ್ಥಾಪನೆ : ಮೆಹಬೂಬ್ ಪಾಷಾ

ಕಂಠೀರವ ಸ್ಟುಡಿಯೋಸ್ ವಜ್ರ ಮಹೋತ್ಸವ ಆಚರಣೆಗೆ 1 ಕೋಟಿ ರೂ. ಬಿಡುಗಡೆ

Update: 2025-11-05 14:19 IST

ಬೀದರ್ : ಮುಂಬರುವ ಹೊಸ ವರ್ಷದಲ್ಲಿ ಕನ್ನಡ ಚಿತ್ರಗಳಿಗೆ ಜಾಗತಿಕ ವೇದಿಕೆ ಕಲ್ಪಿಸಲು ಶೀಘ್ರವೆ ಓಟಿಟಿ ಪ್ರಾರಂಭಿಸಲಾಗುತ್ತಿದೆ. ಕಂಠೀರವ ಸ್ಟುಡಿಯೋಸ್ ವಜ್ರ ಮಹೋತ್ಸವಕ್ಕೆ ಸರ್ಕಾರದಿಂದ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮೆಹಬೂಬ್ ಪಾಷಾ ಅವರು ಹೇಳಿದರು.

ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮೆಜಾನ್, ಜೀ5, ಜಿಯೋ ಹಾಟ್‍ಸ್ಟಾರ್, ನೆಟ್‍ಫ್ಲಿಕ್ಸ್ ಸೇರಿದಂತೆ ಖಾಸಗಿ ಓಟಿಟಿಗಳಲ್ಲಿ ಕನ್ನಡದ ಆಯ್ದ ಚಲನಚಿತ್ರಗಳಿಗೆ ಮಾತ್ರ ವೇದಿಕೆ ದೊರಕುತ್ತಿದೆ. ಇದರಿಂದಾಗಿ ಸುಮಾರು 4 ಸಾವಿರಕ್ಕೂ ಅಧಿಕ ಕನ್ನಡ ಸಿನಿಮಾಗಳು, ವಿತರಕರು ಹಾಗೂ ಚಿತ್ರ ಮಂದಿರಗಳ ಕೊರತೆಯಿಂದ ಬಿಡುಗಡೆ ಭಾಗ್ಯವನ್ನೇ ಕಂಡಿಲ್ಲ. ಇದರಿಂದಾಗಿ ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಇದ್ದಾರೆ. ಇಂಥ ಸಿನಿಮಾಗಳಿಗೆ ಕೇವಲ ನಮ್ಮ ರಾಜ್ಯ, ದೇಶ ಮಾತ್ರವಲ್ಲ, ಜಾಗತಿಕವಾಗಿ ವೇದಿಕೆ ಕಲ್ಪಿಸಿ ಕೊಡಲು ಸರ್ಕಾರದಿಂದಲೇ ಮುಂಬರುವ ಹೊಸ ವರ್ಷದಲ್ಲಿ ಓಟಿಟಿ ಪ್ರಾರಂಭಿಸಲಾಗುತ್ತಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ಸಹ ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಓಟಿಟಿ ಸ್ಥಾಪನೆಗೆ ಸಂಬಂಧ ಈಗಾಗಲೆ ಸರ್ಕಾರ ಬಜೆಟ್‍ನಲ್ಲಿಯೇ ಘೋಷಿಸಿದೆ. ತಾಂತ್ರಿಕ ಸಿದ್ದತೆಗಳನ್ನು ಕೂಡ ಕೈಗೊಳ್ಳಲಾಗಿದೆ. ಹಲವು ಬಾರಿ ಉನ್ನತ ಮಟ್ಟದ ಸಭೆಗಳು ನಡೆದಿವೆ. ಓಟಿಟಿ ಸ್ಥಾಪನೆಯಿಂದ ಕನ್ನಡ ಸಿನಿಮಾಗಳ ಜೊತೆಗೆ ಧಾರವಾಹಿ, ಜಾನಪದ ಕಲೆ ಹಾಗೂ ಸ್ಥಳೀಯ ಮತ್ತು ಬುಡಕಟ್ಟು ಸಂಸ್ಕೃತಿಗಳಿಗೂ ಸಹ ಜಾಗತಿಕ ಮಟ್ಟದಲ್ಲಿ ವೇದಿಕೆ ದೊರಯಲಿದೆ. ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರಗಳ ವೀಕ್ಷಣೆಗೆ ಹೆಚ್ಚಿನ ದರ ವಿಧಿಸಿದರೆ, ರಾಜ್ಯ ಸರ್ಕಾರ ಪ್ರಾರಂಭಿಸುವ ಒಟಿಟಿ ವೇದಿಕೆಯಲ್ಲಿ ಅಲ್ಪ ಮೊತ್ತ ಪಾವತಿಸಿ, ವಿಶ್ವದ ಎಲ್ಲೆಡೆ ಇರುವ ಕನ್ನಡಿಗರು ಚಂದಾದರರಾಗಿ ಕನ್ನಡ ಸಿನಿಮಾ ಹಾಗೂ ಜಾನಪದ ಕಲೆಗಳನ್ನು ವೀಕ್ಷಿಸಬಹುದಾಗಿದೆ. ಇದರಿಂದ ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ, ನಿರ್ದೇಶಕರಿಗೆ, ನಟ ನಟಿಯರು, ಕಲಾವಿದರು ತಂತ್ರಜ್ಞರಿಗೆ ಉಪಯುಕ್ತವಾಗಲಿದೆ. ಜೊತೆಗೆ ಹೊಸ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ದೊರಕಲಿದೆ. ವೀಕ್ಷಣೆಯ ಆಧಾರದಲ್ಲಿ ನಿರ್ಮಾಪಕರೊಂದಿಗೆ ಲಾಭಾಂಶ ಹಂಚಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋಸ್ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವ ಆಚರಣೆ ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ಸಿನಿಮಾ ನಿರ್ಮಾಣ, ಸ್ಟುಡಿಯೋ ಕುರಿತು ವಿಚಾರ ಸಂಕಿರಣ, ಕಂಠೀರವ ಸ್ಟುಡಿಯೋಸ್ ನಿರ್ಮಾಣದ ಸ್ಥಾಪಕ ಟಿ.ಎಸ್.ಕರಿಬಸವಯ್ಯ ಪುತ್ಥಳಿ ನಿರ್ಮಾಣ, ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಚಲನಚಿತ್ರ ನಿರ್ಮಾಣ ಮಾಡುವುದು ಹಾಗೂ ಸಂಗೀತ ಸಂಜೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕಂಠೀರವ ಸ್ಟುಡಿಯೋಸ್ ವಜ್ರ ಮಹೋತ್ಸವ ಆಚರಣೆಗಾಗಿ ಸರ್ಕಾರದಿಂದ ಈಗಾಗಲೇ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

1966ರಲ್ಲಿ ಕಂಠೀರವ ಸ್ಟುಡಿಯೋಸ್ ಅನ್ನು ಗುಬ್ಬಿ ವೀರಣ್ಣ, ಟಿ.ಎಸ್.ಕರಿಬಸಯ್ಯ ಮತ್ತಿತರರು ಸೇರಿದಂತೆ ಬೆಂಗಳೂರಿನಲ್ಲಿ ಜಮೀನು ಖರೀದಿ ಮಾಡಿ ಖಾಸಗಿ ಸಹಭಾಗಿತ್ವದಲ್ಲಿ ಅದನ್ನು ಸ್ಥಾಪನೆ ಮಾಡಿದರು. ಇದಕ್ಕೂ ಪೂರ್ವದಲ್ಲಿ ಕನ್ನಡ ಚಲನಚಿತ್ರ ನಿರ್ಮಾಣ ಕುರಿತ ಕೆಲಸ ಕಾರ್ಯಗಳಿಗೆ ಮದ್ರಾಸ್‍ಗೆ ಹೋಗಬೇಕಿತ್ತು. ಹೀಗಾಗಿ ಇಲ್ಲಿಯೇ ಚಲನಚಿತ್ರಗಳ ನಿರ್ಮಾಣಕ್ಕೆ ಸಂಬಧಿಸಿದ ಕೆಲಸಗಳು ಆಗಬೇಕು ಎನ್ನುವ ಕಾರಣಕ್ಕಾಗಿ, ಮೊಟ್ಟ ಮೊದಲನೆಯ ಕಂಠೀರವ ಸ್ಟುಡಿಯೋಸ್‍ಗೆ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು 5 ಲಕ್ಷ ರೂ. ಅನುದಾನ ನೀಡಿ, ಸ್ಟುಡಿಯೋ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಪ್ರೋತ್ಸಾಹ ನೀಡಿದರು. ಬಳಿಕ ಕಂಠೀರವ ಸ್ಟುಡಿಯೋವನ್ನು ನಡೆಸಲು ಸಾಧ್ಯವಾಗದೇ 1974 ರಲ್ಲಿ ಸರ್ಕಾರದ ವಶಕ್ಕೆ ನೀಡಿದರು. ಆಗಿನಿಂದಲೂ ಸರ್ಕಾರವೇ ಕಂಠೀರವ ಸ್ಟುಡಿಯೋ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಸುಳ್ಳೊಳ್ಳಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News