×
Ad

ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತಗೊಳಿಸುವುದೇ ನಮ್ಮ ಗುರಿ : ಸಚಿವ ಈಶ್ವರ್ ಖಂಡ್ರೆ

Update: 2025-06-01 18:44 IST

ಬೀದರ್ : ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತಗೊಳಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಭಾಲ್ಕಿಯಲ್ಲಿ ಸಂಸದರ ಕಚೇರಿ ಎದುರುಗಡೆ ವಿವಿಧ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, 2013 ರಿಂದ 18ರ ಅವಧಿಯಲ್ಲಿ ನಾವು ಸಚಿವರಾಗಿದ್ದಾಗ ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ 25,000 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಪೂರ್ಣಗೊಳ್ಳಲಿಲ್ಲ.  ಈ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ನಮ್ಮ ಸರಕಾರ ಬಡವರ ಅಭಿವೃದ್ಧಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷೀ ಯೋಜನೆಯ ಅಡಿಯಲ್ಲಿ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ನೀಡಲಾಗುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಗೃಹ ಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ ಮಾಡುವುದೇ ನಮ್ಮ ಸರಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. 

ಭಾಲ್ಕಿ ತಾಲೂಕಿಗೆ ಒಟ್ಟು 8 ಸಾವಿರ ಮನೆಗಳು ಮಂಜೂರಾಗಿವೆ. ಅದರಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ 7,000 ಮನೆ ಮತ್ತು ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 1,000  ಮನೆಗಳು ಮಂಜೂರಾಗಿವೆ. ಜನರಿಗೆ ಅವಶ್ಯಕವಿರುವ ಅನ್ನ, ವಸತಿ, ಶಿಕ್ಷಣ, ಆರೋಗ್ಯ ನೀಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು. 

ಸಂಸದ ಸಾಗರ್ ಖಂಡ್ರೆ ಮಾತನಾಡಿ, ಮಳೆ, ಗಾಳಿ, ಬಿಸಿಲಿನಿಂದ ರಕ್ಷಿಸಲು ಒಂದು ಮನೆ ಅವಶ್ಯಕವಾಗಿ ಬೇಕಾಗಿರುತ್ತದೆ. ಕೇವಲ ಭಾಲ್ಕಿ ಮಾತ್ರವಲ್ಲದೆ ಇಡೀ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ವಸತಿ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದವರಿಗೆ 1 ಲಕ್ಷ 20 ಸಾವಿರ ರೂ. ಹಾಗೂ ಪ.ಜಾ. ಪ.ಪಂ ದವರಿಗೆ 1 ಲಕ್ಷ 75 ಸಾವಿರ ರೂ. ಮನೆ ನಿರ್ಮಾಣಕ್ಕಾಗಿ ಹಣ ನೀಡಲಾಗುತ್ತಿದೆ. ಈ ಹಣದಲ್ಲಿ ಉತ್ತಮವಾದ ಮನೆ ನಿರ್ಮಾಣ ಕಷ್ಟವಾಗುತ್ತದೆ. ಆದ್ದರಿಂದ ಒಂದು ಮನೆ ನಿರ್ಮಾಣಕ್ಕೆ 5 ರಿಂದ 7 ಲಕ್ಷ ರೂ.ವರೆಗೆ ಹಣ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಲ್ಕಿ ತಾಲೂಕಿನ 34 ಗ್ರಾಮ ಪಂಚಾಯತ್‌ನಲ್ಲಿ ಬರುವ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ಒಟ್ಟು 2,202 ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಲಾಯಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News