ಬೀದರ್: ಸರ್ಕಾರಿ ಭೂಮಿ ರಕ್ಷಿಸಲು ವಿಫಲರಾದ ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಧರಣಿ
ಬೀದರ್: ತಹಸೀಲ್ದಾರ್ ಅವರಿಗೆ ಸರ್ಕಾರಿ ಭೂಮಿ ಉಳಿಸಿ, ರಕ್ಷಿಸಿ ಮತ್ತು ಸುತ್ತುಗೋಡೆ ನಿರ್ಮಿಸಿ ಗುರುತಿಸಬೇಕು ಎಂದು ಸರ್ಕಾರದ ಸ್ಪಷ್ಟವಾದ ಸುತ್ತೋಲೆ ಮತ್ತು ನಿರ್ದೇಶನ ಇದ್ದರೂ ಕೂಡ ಅವರು ಆ ಸುತ್ತೋಲೆಯನ್ನು ಗಾಳಿಗೆ ತೂರಿ ಕರ್ತವ್ಯಲೋಪ ಎಸಗುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ತಕ್ಷಣವೇ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯು ಒತ್ತಾಯಿಸಿದೆ.
ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಬೀದರ್ ತಾಲ್ಲೂಕಿನಲ್ಲಿ ಭೂ ಮಾಫಿಯಾಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿವೆ. ಸರ್ಕಾರಿ ಭೂಮಿಯ ಹತ್ತಿರ ಪಟ್ಟಾ ಭೂಮಿ ಖರೀದಿ ಮಾಡಿ ನಿವೇಶನಗಳನ್ನು ಹಾಕುವ ಮೂಲಕ ಪಕ್ಕದಲ್ಲಿರುವ ಸರ್ಕಾರಿ ಭೂಮಿ ಮತ್ತು ಪಟ್ಟಾ ಭೂಮಿ ಸೇರಿಸಿಕೊಂಡು ಕಳ್ಳ ಮಾರ್ಗದಿಂದ ನಗರಸಭೆ ಹಾಗೂ ಗ್ರಾಮ ಪಂಚಾಯತಿಯ ಮೂಲಕ ನಿವೇಶನಗಳ ಖಾತೆಗಳನ್ನು ಮಾಡಿಕೊಳ್ಳುತ್ತಿರುವುದು ಜಗಜ್ಜಾಹೀರವಾಗಿದೆ ಎಂದು ದೂರಲಾಗಿದೆ.
ಇದರ ವಿರುದ್ಧ 2021 ರಿಂದ ಇಲ್ಲಿಯವರೆಗೆ ಮನವಿ ಪತ್ರ ಸಲ್ಲಿಸಿದರೂ ಕೂಡ ತಹಸೀಲ್ದಾರರು ಹೆಸರಿಗೆ ಮಾತ್ರ ತನಿಖೆ, ನೋಟಿಸ್ ನೀಡಿರುವುದಾಗಿ ಹೇಳಿ ಕಾಲ ಹರಣ ಮಾಡುತ್ತಿದ್ದಾರೆ. ಬೀದರ್ ತಹಸೀಲ್ದಾರರು ಸರ್ಕಾರಿ ಭೂಮಿ ಉಳಿಸದೇ ಭೂ ಮಾಫಿಯಾ ಜೊತೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ತವ್ಯಲೋಪ ಎಸಗಿರುವ ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ಸ್ವಾಮಿದಾಸ್ ಕೆಂಪೆನೋರ್, ಸಂಸ್ಥಾಪಕ ಕಾರ್ಯಾಧ್ಯಕ್ಷ ತುಕಾರಾಮ್ ರಾಗಪೂರೆ, ಸಂಸ್ಥಾಪಕ ಉಪಾಧ್ಯಕ್ಷರಾದ ಸಂಗಮೇಶ್ ಏಣಕೂರ್, ಸುರೇಶ ಎನ್. ದೊಡ್ಡಿ, ಜಿಲ್ಲಾಧ್ಯಕ್ಷ ಡಾ. ಜೇಮ್ಸ್, ಕಮಲಹಾಸನ್ ಭಾವಿದೊಡ್ಡಿ, ಮಹಮ್ಮದ್ ಸೀರಾಜೋದ್ದೀನ್ ಹಾಗೂ ಶಿವರಾಜ್ ನೇಲವಾಳಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.