×
Ad

ಮಳೆಯಿಂದ ಹಾನಿಯಾದ ಪ್ರದೇಶಗಳ ಪರಿಶೀಲನೆ ನಡೆಸಿ, ತ್ವರಿತವಾಗಿ ಪರಿಹಾರ ನೀಡಲಾಗುವುದು : ಸಚಿವ ಈಶ್ವರ್ ಖಂಡ್ರೆ

Update: 2025-08-26 19:26 IST

ಬೀದರ್ : ಮಳೆಯಿಂದ ಹಾನಿಯಾದ ಪ್ರದೇಶಗಳ ಪರಿಶೀಲನೆ ನಡೆಸಿ, ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.

ಇಂದು ಕಮಲನಗರ್ ಮತ್ತು ಔರಾದ್ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀ̧ಡಿ ಮಳೆಯ ವಿಕೋಪದಿಂದ ಮನೆ, ಪ್ರಾಣಿ, ಬೆಳೆ, ಸೇತುವೆ ಮತ್ತು ಕೆರೆಕಟ್ಟೆ ಹಾನಿಯಾದ ಸ್ಥಳ ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಕಮಲನಗರ ಮತ್ತು ಔರಾದ್ ತಾಲೂಕಿನಲ್ಲಿ 300 ಎಂಎಂ ಮಳೆಯಾಗಿದ್ದು, ಇದರಿಂದಾಗಿ ಅನೇಕ ರೀತಿಯ ಹಾನಿ ಉಂಟಾಗಿದೆ. ರಸ್ತೆ, ಮನೆ, ಸೇತುವೆ ಮುಂತಾದವುಗಳು ಹಾನಿಗೊಳಗಾಗಿವೆ. ತಕ್ಷಣವೇ ಇವುಗಳನ್ನು ಪರಿಹರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಅತಿಯಾದ ಮಳೆಯಿಂದಾಗಿ ರೈತರ ಬೆಳೆಗಳಾದ ಹೆಸರು, ಉದ್ದು, ಸೋಯಾ, ತೊಗರಿ ಬೆಳೆ ಹೆಚ್ಚು ಹಾನಿಯಾಗಿವೆ. ಆದರೆ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ. ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ನಿರಾವರಿ ಭೂಮಿಗೆ 18 ಸಾವಿರ ಹಾಗೂ ಒಣ ಭೂಮಿಗೆ 8 ಸಾವಿರ 5 ನೂರು ರೂ. ಪ್ರತಿ ಹೆಕ್ಟೇರ್ ಗೆ ಪರಿಹಾರ ನೀಡಲಾಗುವುದು. ಸಮೀಕ್ಷೆಗೆ ಈಗಾಗಲೇ ಆದೇಶ ನೀಡಲಾಗಿದೆ. ಗ್ರಾಮ ಸಭೆ ಮೂಲಕ ಜನರ ಸಮಸ್ಯೆಗಳನ್ನು ಕೃಢೀಕರಿಸಿ, ಪರಿಹರಿಸಲು ತಿಳಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಅವರಿಗೆ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿಯ ಬಗ್ಗೆ ತಿಳಿಸಲಾಗಿದೆ ಎಂದರು.

ಇದೇ ಸಮಯದಲ್ಲಿ ಬಾವಲಗಾಂವ್‌ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ, ಶಾಲೆಯಲ್ಲಿ ಕನ್ನಡ ಕಲಿಕೆ ಹೆಚ್ಚಾಗಬೇಕು ಎಂದು ಮುಖ್ಯ ಶಿಕ್ಷಕರಿಗೆ ತಿಳಿಸಿದರು.

ಕಮಲನಗರ ತಾಲೂಕಿನ ಅಕನಾಪೂರ ಗ್ರಾಮದ ಎಂಐ ಟ್ಯಾಂಕ್ ಕೆರೆ ವೀಕ್ಷಿಸಿ, ರೈತರ ಸಮಸ್ಯೆ ಆಲಿಸಿದರು. ಮುತಖೇಡ್ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಿಸಿ, ನಂದಿ ಬೀಜಲಗಾಂವ್ ಬ್ರಿಡ್ಜ್ ಮತ್ತು ಮನೆ ಹಾನಿ ವೀಕ್ಷಿಸಿದರು. ಔರಾದ್ ತಾಲೂಕಿನ ಬಾವಲಗಾಂವ್, ಹಂಗರಗಾ, ಸಾವರಗಾಂವ್ ಹಾಗೂ ಬೋಂತಿ ಗಾಮಾನಾಯಕ ತಾಂಡಾದ ಬೆಳೆ ಹಾನಿ, ರಸ್ತೆ, ಮನೆ, ಸೇತುವೆಯನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಹಾಗೂ ಬೀದರ ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್ ಸೇರಿದಂತೆ ಕಮಲನಗರ ಮತ್ತು ಔರಾದ್ ತಾಲೂಕಿನ ತಹಶೀಲ್ದಾರರು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News