ಓದುವಿಕೆಯಿಂದ ಜಗತ್ತಿನ ಅರಿವು ಸಾಧ್ಯ: ರಶ್ಮಿ ಎಸ್.
ಬೀದರ್ : ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅದರಿಂದ ಜನರ ನೆಮ್ಮದಿ ಕಳೆದು ಹೋಗುತ್ತಿದೆ. ಪತ್ರಿಕೆಗಳು ಸೇರಿ ಒಟ್ಟು ಏನನ್ನಾದರೂ ಓದುವಿಕೆ ಇದ್ದರೆಯೇ ಅಂತಃಕರಣದ ಸಮಾಜ ರೂಪಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತೆ ರಶ್ಮಿ ಎಸ್ ಅವರು ಹೇಳಿದರು.
ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆ ಹಾಗೂ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಲ್ಯಾಣದಲ್ಲಿ ಹನ್ನೆರಡನೇ ಶತಮಾನದಲ್ಲಿಯೇ ಸಿಟಿಜನ್ ಜರ್ನಲಿಸಂ ಆರಂಭವಾಗಿತ್ತು. ಸಮಾಜದ ಓರೆ ಕೋರೆಗಳನ್ನು ಗುರುತಿಸುವ, ಸಮಸ್ಯೆಗಳನ್ನು ಗ್ರಹಿಸುವ, ಪರಿಹಾರ ಕಂಡುಕೊಳ್ಳುವ, ಪ್ರಭುತ್ವ ಪ್ರಶ್ನಿಸುವ ಕೆಲಸ ವಚನಕಾರರು ಅಂದೇ ಮಾಡಿದ್ದರು. ಹಾಗೆಯೇ ಅವರು ಸಾತ್ವಿಕ ಮಾರ್ಗ ಅನುಸರಿಸಿದ್ದರು ಎಂದರು.
ಸಹನಾಭೂತಿ ಒಂದೇ ನಮ್ಮನ್ನು ಪಶುಗಳಿಂದ, ಪಕ್ಷಿಗಳಿಂದ ಬೇರ್ಪಡಿಸಿ ಮನುಷ್ಯನನ್ನಾಗಿಸಿದೆ. ಸ್ವಾವಲಂಬನೆಗೆ, ಸ್ವಯಂಭೂಗಾಗಿ, ಸಾಮುದಾಯಿಕ ಹಿತಕ್ಕೆ ಪತ್ರಿಕೆ ಓದಬೇಕು ಎಂದು ಅವರು ತಿಳಿಸಿದರು.
ಶಾಸಕ ಶರಣು ಸಲಗರ್ ಅವರು ಮಾತನಾಡಿ, ರಾಜಕಾರಣಿಗಳ ಬಗ್ಗೆ ನಂಬಿಕೆ ಕಡಿಮೆಯಾಗಿರಬಹುದು, ಪತ್ರಿಕೆಗಳ ಮೇಲೆ ಜನರ ನಂಬಿಕೆ ಗಾಢವಾಗಿದೆ. ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಧ್ಯಮಗಳು ಮಾಡುತ್ತವೆ. ರಾಜಕಾರಣಿಗಳಿಂದ ಆಗದ ಕೆಲಸಗಳು ಮಾಧ್ಯಮದಿಂದ ಸಾಧ್ಯವಾಗಿವೆ ಎಂದು ಹೇಳಿದರು.
ಪತ್ರಿಕಾ ಭವನಕ್ಕೆ ನಿವೇಶನವಿದ್ದರೆ ಅದಕ್ಕೆ ಬೇಕಾದ ಅನುದಾನವನ್ನು ಕೆಕೆಆರ್‌ಡಿಬಿಯಿಂದ ಬಿಡುಗಡೆಗೊಳಿಸಿ ಪತ್ರಿಕಾ ಭವನ ನಿರ್ಮಿಸುವ ಭರವಸೆ ನೀಡಿದ ಅವರು,
ಪತ್ರಕರ್ತರು ಅನೇಕ ಸಂಗತಿಗಳನ್ನು ಬರೆದು ನಮ್ಮ ಗಮನಕ್ಕೆ ತಂದಿದ್ದಾರೆ. ನಾನು ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೆನೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ದೇಶದ ಸ್ವಾತಂತ್ರ್ಯದಲ್ಲಿ , ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಪತ್ರಿಕೆಗಳು ಸಮಾಜದ ಕನ್ನಡಿ. ಹಲವು ಸಮಸ್ಯೆಗಳನ್ನು ಅಧಿಕಾರದಲ್ಲಿರುವವರ ಎದುರಿಗೆ ತಂದು ಇಡುವ ಕೆಲಸ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ್ ದೇವಪ್ಪ ಅವರು ಮಾತನಾಡಿ, ಸಾಮಾಜಿಕ ಬೆಳವಣಿಗೆಗೆ ಮಾಧ್ಯಮ ಹೆಚ್ಚು ಒತ್ತು ನೀಡಿದೆ. ಆಡಳಿತಾತ್ಮಕ ಸುಧಾರಣೆ, ಪ್ರಭುತ್ವದ ಪ್ರಜ್ಞಾಪೂರ್ವಕ ಕೆಲಸಕ್ಕೆ ಅಣಿಯಾಗಲು ಎಚ್ಚರಿಸುತ್ತದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣ ಮತ್ತು ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆಗೆ ಶ್ರಮಿಸುವೆ ಎಂದು ನುಡಿದರು.
ತಾಲೂಕಿನ ಎಲ್ಲಾ ಪತ್ರಕರ್ತರಿಗೆ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮದವರಿಗೆ ಹಾಗೂ ಪತ್ರಿಕಾ ಎಜೆಂಟರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಕಾಶ್ ಕುದರಿ, ಡಿವೈಎಸ್ಪಿ ಮಡೋಳಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕಾಂತ್ ಶೆಂಬೆಳ್ಳಿ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ್ ರಗಟೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ ನಾರಾಯಣರಾವ್, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್ ಹಾಗೂ ಸರ್ಕಾರಿ ನೌಕರರ ತಾಲೂಕಾಧ್ಯಕ್ಷ ದಿಲೀಪಕುಮಾರ್ ಉತ್ತಮ್ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಾರ್ಥಂಡ್ ಜ್ಯೋಷಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮುಳೆ ಪ್ರಶಸ್ತಿ ಪತ್ರ ವಾಚಿಸಿದರು. ಎಂ ಡಿ ನೈಮೋದ್ದಿನ್ ವಂದಿಸಿದರು.