ಸತ್ಯ, ಸದಾಚಾರದ ಬದುಕಿಗೆ ಗುರು ಅಗತ್ಯ: ಪ್ರಭುದೇವ್ ಮಹಾಸ್ವಾಮಿ

Update: 2026-07-31 18:42 IST

ಹುಲಸೂರ್ : ಭಕ್ತರನ್ನು ದೇವರಿಗೆ ಸಲ್ಲುವಂತೆ ರೂಪಿಸಿ, ಅವರ ಬದುಕನ್ನು ತಿದ್ದಿ, ಸನ್ಮಾರ್ಗದಲ್ಲಿ ನಡೆಸುವವನೇ ಸದ್ಗುರು. ಗುರುವಿನ ಕೈಹಿಡಿದು ದೇವರ ಕಡೆಗೆ ಪಯಣಿಸುವವನೇ ಜಾಣ. ಸತ್ಯ, ಸದಾಚಾರದ ಬದುಕಿಗೆ ಗುರು ಅಗತ್ಯ ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿ ಪ್ರಭುದೇವ ಸ್ವಾಮಿ ಹೇಳಿದರು.

ತಾಲ್ಲೂಕಿನ ಗೋರ್ಟಾ (ಬಿ) ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಗುರುವಾರ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗುರು ಮತ್ತು ದೇವರ ನಡುವಿನ ವ್ಯತ್ಯಾಸ ತಾಯಿ–ತಂದೆಯರ ನಡುವಿನ ವ್ಯತ್ಯಾಸದಂತಿದೆ. ಮಗುವನ್ನು ಸ್ವಚ್ಛಗೊಳಿಸಿ, ಅಲಂಕರಿಸಿ ಸಿದ್ಧಪಡಿಸಿದ ಬಳಿಕ ತಂದೆ ಎತ್ತಿಕೊಂಡು ಮುದ್ದಿಸುತ್ತಾನೆ. ಅದೇ ರೀತಿ ಭಕ್ತರನ್ನು ದೇವರಿಗೆ ಅರ್ಪಣೆಯಾಗುವಂತೆ ತಿದ್ದಿ, ತಿಕ್ಕಿ, ತೊಳೆದು ಸಿದ್ಧಪಡಿಸುವವನು ಸದ್ಗುರು ಎಂದು ಅವರು ತಿಳಿಸಿದರು.

ಗುರುವಿನ ಕೃಪೆಯಾದರೆ ಕರ್ಮಗಳೆಲ್ಲ ಬೆಚ್ಚಿ ಬೀಳುತ್ತವೆ. ಯಾರ ಬದುಕಿನಲ್ಲಿ ಗುರುವಿಲ್ಲವೋ ಅವರು ದಿಕ್ಕೆಟ್ಟವರಾಗುತ್ತಾರೆ. ದಿಕ್ಕು ತೋರಿಸುವ ದಿಕ್ಸೂಚಿಯೇ ಗುರು. ಆಕಾಶದಲ್ಲಿ ನಕ್ಷತ್ರಗಳು, ಸೂರ್ಯ ಇದ್ದರೂ ಮನೆಯನ್ನು ಬೆಳಗಿಸಲು ಒಂದು ದೀಪ ಬೇಕಾಗುತ್ತದೆ. ಅದೇ ರೀತಿ ಬದುಕಿನ ಅಂಧಕಾರವನ್ನು ದೂರ ಮಾಡಿ ಮನಸ್ಸನ್ನು ಬೆಳಗಿಸುವ ದೀಪವೇ ಗುರು ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ್ ಕಾಮಣ್ಣ ಅವರು ಮಾತನಾಡಿ, ಬಸವಣ್ಣನವರು ಜಗದ್ಗುರು. ಮರ್ತ್ಯ ಮಾನವರ ಮನದ ಮೈಲಿಗೆಯನ್ನು ತೊಳೆಯಲು ಬಂದವರು. ಅಲ್ಲಮಪ್ರಭು ದೇವರು ಕೂಡ 'ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕೆಯೂ ಗುರು ಕಾಣ ಗುಹೇಶ್ವರ’ ಎಂದು ಸಾರಿದ್ದಾರೆ. ಚೆನ್ನಬಸವಣ್ಣನವರು ಹರನು ತನ್ನ ರೂಪವನ್ನು ತೋರಲೆಂದು ಗುರುವಾಗಿ ಬಂದನು ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

ಅಲ್ಲಮಪ್ರಭು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ್ ಅಕ್ಕಣ್ಣ ಅವರು ಮಾತನಾಡಿ, ಇಂದಿನ ಯುವಜನರ ಸ್ಥಿತಿಯನ್ನು ನೋಡಿದರೆ ಮನ ಮರುಗುತ್ತದೆ. ಗೊತ್ತು–ಗುರಿಯಿಲ್ಲದೆ ಬದುಕು ಹಾಳು ಮಾಡಿಕೊಳ್ಳುತ್ತಿರುವ ಯುವಜನರಿಗೆ ದಾರಿ ತೋರಿಸುವ ಉದ್ದೇಶದಿಂದ ಲಿಂಗಾಯತ ಮಹಾಮಠದಲ್ಲಿ ಪ್ರತಿತಿಂಗಳು ಮಾಸಿಕ ಶರಣ ಸಂಗಮ ಆಯೋಜಿಸಿ ಸದ್ಗುಣಗಳನ್ನು ಬಿತ್ತುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ವೇಳೆ ನಿವೃತ್ತ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆರತಿ ಚನ್ನಬಸವ ಯರನಾಳೆ, ಶ್ರೀದೇವಿ ಶರಣಬಸವ ಮಠಪತಿ, ವೀರಶೆಟ್ಟಿ ರಾಜೋಳೆ ಹಾಗೂ ಮಲ್ಲಮ್ಮ ಸೇರಿದಂತೆ ಇತರರು ಇದ್ದರು. ಪ್ರಜ್ವಲ ಪತಂಗೆ ನಿರೂಪಿಸಿದರು. ಸಾನಿಧ್ಯ ಪತಂಗೆ ಸ್ವಾಗತಿಸಿದರು. ಗೌರಿ ಮಠಪತಿ ವಚನಗಾಯನ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News