×
Ad

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ: ಸಚಿವ ರಹೀಮ್ ಖಾನ್

Update: 2025-09-09 23:42 IST

ಬೀದರ್ : ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ತಿಳಿಸಿದರು.

ಇಂದು ನಗರದ ಬೆಲ್ದಾಳೆ ಕನ್ವೇನಷನ್ ಹಾಲ್ ನಲ್ಲಿ ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೀದರ್ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಹೇಗೆ ಒಬ್ಬ ಶಿಲ್ಪಿ ಕಲ್ಲನ್ನು ಶಿಲೆಯನ್ನಾಗಿ ಮಾಡುವನೋ ಹಾಗೆ ಶಿಕ್ಷಕ ವಿದ್ಯಾರ್ಥಿಯನ್ನು ತಿದ್ದಿ, ತೀಡಿ ಉತ್ತಮ ವ್ಯಕ್ತಿಯನ್ನಾಗಿ ಮಾಡುವರು. ಹಿಂದಿನ ಕಾಲದಿಂದಲೂ ಗುರುಗಳಿಗೆ ಉನ್ನತ ಸ್ಥಾನ ನೀಡಿ ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶಕರಾಗಿ, ಉತ್ತಮ ಜೀವನ ಕಟ್ಟಿಕೊಳ್ಳಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಸಹಕಾರ ಹಾಗೂ ಅವರ ಹೋರಾಟಗಳಿಗೆ ಬೆಂಬಲ ಯಾವಾಗಲೂ ಇರುತ್ತದೆ ಎಂದರು.

ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಮಾತನಾಡಿ, ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞರು ಆಗಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚಾರಿಸಲಾಗುತ್ತಿದೆ. ತಮ್ಮ ಮೊದಲ ಗುರು ಆಗಿರುವ ತಮ್ಮ ತಾಯಿ ಕೂಡ ಶಿಕ್ಷಕಿ ಆಗಿದ್ದರು. ಅವರ ಆಶಿರ್ವಾದಿಂದ ತಾವು ಜನ ಸೇವೆಯಲ್ಲಿ ತೊಡಗಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಕರು ಪಾಠ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ವಿದ್ಯಾರ್ಥಿಗಳು ಕೂಡ ಮೊಬೈಲ್ ಬಳಕೆಯಿಂದ ದೂರ ಇರಬೇಕು. ಶಿಕ್ಷಕರ ಹಾಗೂ ಅಡುಗೆ ಸಿಬ್ಬಂದಿಯವರ ಸಮಸ್ಯೆ ಬಗೆಹರಿಸಲು ತಿಂಗಳಿಗೊಮ್ಮೆ ಸಭೆ ಕರೆಯಬೇಕು. 10 ನೇ ತರಗತಿಯ ಫಲಿತಾಂಶ ಕಳೆದ ವರ್ಷಕ್ಕಿಂತ ಹೆಚ್ಚಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಲಹಂಕದ ಅಭಯಂತ್ ಸ್ವಾಮಿಗಳು ವಿಶೇಷ ಉಪನ್ಯಾಸ ನೀಡಿದರು. 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಸರ್ಕಾರದ ವತಿಯಿಂದ ಲ್ಯಾಪ್ ಟಾಪ್‍ ನೀಡಲಾಯಿತು ಹಾಗೆಯೇ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹೆಚ್. ಜಿ ಸುರೇಶ್, ಬೀದರ್ ತಾಲೂಕು ಪಂಚಾಯತ್ ಇಓ ಮಾಣಿಕರಾವ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮದರಖಾನ್ ಅಲಿಖಾನ್ ಪಠಾಣ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಗಮೇಶ್ ಚೀದ್ರಿ ಸೇರಿದಂತೆ ಇತರೆ ಅಧಿಕಾರಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News