ಬೀದರ್ | ಕ್ರಿಪ್ಟೋಕರೆನ್ಸಿಯಿಂದ ಹಣ ಸಂಪಾದಿಸಿ ಎಂದು 1 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಬೀದರ್ : ಕ್ರಿಪ್ಟೋಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿ ಮನೆಯಲ್ಲಿಯೇ ಕುಳಿತು ದುಡ್ಡು ಸಂಪಾದಿಸಿ ಎಂದು ನಂಬಿಸಿ 1 ಲಕ್ಷ ರೂ. ಆನ್ಲೈನ್ ನಿಂದ ಹಾಕಿಸಿಕೊಂಡು ವಂಚಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದು, ಈ ಸಂಬಂಧ ಶುಕ್ರವಾರ ಪ್ರಕರಣ ದಾಖಲಾಗಿದೆ.
ನಗರದ ಹಕ್ ಕಾಲೋನಿಯ ನಿವಾಸಿ ಗುಲಾಮ್ ಮುಜತಬಾ ಮುಜಾಹೀದ್ ಎಂಬವರು ಹಣ ಕಳೆದುಕೊಂಡವರು.
ವಿಷ್ಣುಕುಮಾರ್ ಎಂಬ ವ್ಯಕ್ತಿಯು ನನಗೆ ಕರೆ ಮಾಡಿ ಕ್ರಿಪ್ಟೋಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಲು ಇಚ್ಚಿಸಿದ್ದೀರಾ? ಮನೆಯಲ್ಲಿಯೇ ಕುಳಿತುಕೊಂಡು ಹಣ ಸಂಪಾದಿಸಬಹುದು ಎಂದು ಹೇಳಿದನು. ಅದನ್ನೇ ನಂಬಿದ ನಾನು ಹೌದು ಎಂದು ಹೇಳಿದ್ದೇನೆ. ಅಷ್ಟರಲ್ಲೇ ಆತನು ನನಗೆ ಒಂದು ಲಿಂಕ್ ಕಳುಹಿಸಿದ್ದಾನೆ. ನಂತರ ಆತನು ವಾಟ್ಸಪ್ ನಲ್ಲಿ ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿದ್ದು, ಇದಕ್ಕೆ ಹಣ ಹಾಕಿ ನಿಮ್ಮ ರಿಜಿಷ್ಟ್ರೇಶನ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಹಾಗಾಗಿ ಆ ಕ್ಯೂಆರ್ ಕೋಡ್ ಗೆ 1 ಲಕ್ಷ ರೂ. ಕಳುಹಿಸಿದ್ದೇನೆ. ನಂತರ ಆತನಿಗೆ ಸಂಪರ್ಕಿಸಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಬರುತಿತ್ತು. ಹಾಗಾಗಿ ನಾನು ಮೋಸ ಹೋಗಿದ್ದೇನೆ ಎಂದು ನನಗೆ ಗೊತ್ತಾಯಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬೀದರ್ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.