ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದಾಗಲೆಲ್ಲ ಸಮಾಜ ಒಡೆಯುವ ಕೆಲಸವಾಗುತ್ತಿದೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
ಬೀದರ್ : ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಬಂದಾಗೆಲ್ಲ ಸಮಾಜವನ್ನು ಒಡೆಯುವ ಕೆಲಸವೇ ನಡೆಯುತ್ತಿದೆ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2013ರಲ್ಲಿ ವೀರಶೈವ-ಲಿಂಗಾಯತರನ್ನು ಒಡೆದು ಸಂಘರ್ಷ ಸೃಷ್ಟಿಸಲಾಯಿತು. ಈಗ ಸಂಪೂರ್ಣ ಎಸ್.ಸಿ., ಎಸ್.ಟಿ. ಸಮಾಜವನ್ನು ಉಪಜಾತಿಗಳ ಆಧಾರದ ಮೇಲೆ ಒಡೆಯುವ ಕಾರ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ವೀರಶೈವ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕ್ರಿಶ್ಚಿಯನ್ ಎಂಬ ಹೆಸರಿನಲ್ಲಿ ಸಮುದಾಯಗಳನ್ನು ವಿಭಜಿಸಿ, ಎಸ್.ಸಿ.-ಎಸ್.ಟಿ. ಮೀಸಲಾತಿಯನ್ನು ಕಸಿದುಕೊಳ್ಳುವ ಯತ್ನ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಮೀಸಲಾತಿ ಬೇರೆ ಇದೆ. ಆದರೆ ಅವರನ್ನು ನಮ್ಮ ಜಾತಿ-ಧರ್ಮಕ್ಕೆ ಜೋಡಿಸಿ ನಮ್ಮ ಹಕ್ಕು ಕಸಿದುಕೊಳ್ಳುವುದು ಜನವಿರೋಧಿ ಕ್ರಮ ಎಂದು ಕಿಡಿಕಾರಿದರು.
ಸಮಾಜವನ್ನು ಒಡೆಯುವ ಈ ಪ್ರಯತ್ನ ಸಂಪೂರ್ಣವಾಗಿ ಸಿದ್ದರಾಮಯ್ಯನವರ ಮತ ಬ್ಯಾಂಕ್ ಹಾಗೂ ತುಷ್ಟಿಕರಣ ರಾಜಕಾರಣಕ್ಕಾಗಿ. ಇದರ ವಿರುದ್ಧ ನಾವು ಖಂಡಿತವಾಗಿ ಹೋರಾಡುತ್ತೇವೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಮನೆಯಲ್ಲಿ ಹಾಗೂ ಕ್ಯಾಬಿನೆಟ್‌ನಲ್ಲಿಯೇ ವೀರಶೈವ ಸಚಿವರು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.