ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಬದುಕುವುದು ಕಲಿಯಬೇಕು : ಸಚಿವ ಸಂತೋಷ್ ಲಾಡ್
ಬೀದರ್ : ದೇಶದ ಭವಿಷ್ಯ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ದೇಶದಲ್ಲಿ ಬದಲಾವಣೆ ತರಲು ನೀವು ಪ್ರತಿಯೊಬ್ಬರೂ ರಾಜಕೀಯಕ್ಕೆ ಬರಬೇಕಾದ ಅಗತ್ಯವಿಲ್ಲ. ನಿಮ್ಮ ಬದುಕಲ್ಲಿ ನೀವು ಶಿಸ್ತು, ಸಂಯಮ ಅಳವಡಿಸಿಕೊಂಡು ವ್ಯವಸ್ತಿತವಾಗಿ ಬದುಕುವುದನ್ನು ಕಲಿಯಬೇಕು. ನೀವು ಬದಲಾದರೆ ಸಮಾಜವೇ ಬದಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಯ ಎಲ್ಲಾ ಸಂಯೋಜಿತ ಮಹಾ ವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನ ಹಾಗೂ ನಶಾ ಮುಕ್ತ ಕ್ಯಾಂಪಸ್ ಅಭಿಯಾನದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯಪೂರ್ಣ, ಶಿಸ್ತುಬದ್ಧ ಜೀವನ ನಿಮ್ಮ ಆದ್ಯತೆಯಾಗಬೇಕು. ದುಶ್ಚಟಗಳಿಂದ ದೂರವಿರುವ ದೃಢ ಸಂಕಲ್ಪ ಮಾಡಬೇಕು. ನಿಮ್ಮ ಸ್ನೇಹಿತರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಯುವಜನರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ಡ್ರಗ್ಸ್ ಸೇರಿದಂತೆ ದುಶ್ಚಟಗಳ ಪಾಲೂ ಅಧಿಕವಾಗಿವೆ. ದುಶ್ಚಟಗಳು ನಿಮ್ಮ ಬದುಕು, ಕನಸು, ಗುರಿಗಳಿಗೆ ತಡೆಯೊಡ್ಡುವ ಜೊತೆಗೆ ಜೀವನದ ಉದ್ದೇಶವನ್ನೇ ಮರೆಸುತ್ತವೆ. ದುಶ್ಚಟಗಳಿಂದ ದೂರವಿರಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ನಿಮ್ಮ ಜೊತೆಗೆ ಇದ್ದವರನ್ನೂ ಅದರಿಂದ ಹೊರತಲು ಪ್ರಯತ್ನಿಸಬೇಕು ಎಂದು ತಿಳುವಳಿಕೆ ಹೇಳಿದರು.
ನೆಹರು ಕ್ರೀಡಾಂಗಣದಿಂದ ಆರಂಭವಾದ ಜಾಥಾ ಗುದಗೆ ಆಸ್ಪತ್ರೆ, ಹರಳಯ್ಯ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಹಾದು ಬ್ರಿಮ್ಸ್ ಆಸ್ಪತ್ರೆಯಲ್ಲಿ ಮುಕ್ತಾಯಗೊಂಡಿತು. ಸಾವಿರಾರು ವಿದ್ಯಾರ್ಥಿಗಳು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದುಕೊಂಡು, 'ನಶೆ ಬೇಡ ನೆಮ್ಮದಿ ಬೇಕು’, ’ಡ್ರಗ್ಸ್ ಬೇಡ, ಜೀವನ ಬೇಕು", ಅಂಗಾಂಗದಾನ ಮಹಾದಾನ' ಎನ್ನುವ ಘೋಷಣೆ ಕೂಗುತ್ತ ಸಾಗಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೇಟಕಾರ್ ಹಾಗೂ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ್ ಮಾಳಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.