ಕನ್ನಡದ ಅಭಿವೃದ್ಧಿಗಾಗಿ ರೂಪಿಸಿರುವ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ : ಶಾಸಕ ಪ್ರಭು ಚೌವ್ಹಾಣ್
ಬೀದರ್ : ಕನ್ನಡ ಸುಂದರ ಮತ್ತು ಸ್ವತಂತ್ರ ಭಾಷೆಯಾಗಿದೆ. ಕನ್ನಡ ರಕ್ಷಿಸಬೇಕಾದ ರಾಜ್ಯ ಸರ್ಕಾರದಿಂದಲೇ ಕನ್ನಡಕ್ಕೆ ಹಿನ್ನೆಡೆಯಾಗುತ್ತಿದೆ. ಕನ್ನಡದ ಅಭಿವೃದ್ಧಿಗಾಗಿ ರೂಪಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಶಾಸಕ ಪ್ರಭು ಚೌವ್ಹಾಣ ಅವರು ಆರೋಪಿಸಿದರು.
ಇಂದು ಔರಾದ್ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕನ್ನಡಪರ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗುವ ಅನುದಾನ ಕಡಿತಗೊಳಿಸಿ ದುರ್ಬಲಗೊಳಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಜಾಗಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಹೀಗಾದರೆ ಕನ್ನಡದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಬಹಳಷ್ಟು ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿರುವ ಕಡೆಗೆ ಸರ್ಕಾರ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಇದು ಸರಿಯಲ್ಲ. ಅನ್ಯ ಭಾಷೆಗಳನ್ನು ವಿರೋಧಿಸುವುದಿಲ್ಲ. ಆದರೆ ಕನ್ನಡ ಭಾಷೆಗೆ ಧಕ್ಕೆ ತರುವ ಕೆಲಸ ಸರ್ಕಾರ ಮಾಡಬಾರದು ಎಂದರು.
ಹಿಂದೆ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಈ ಭಾಗದಲ್ಲಿ ಉರ್ದು ಭಾಷೆಯ ಪ್ರಭಾವ ಹೆಚ್ಚಾಗಿತ್ತು. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿರುವ ಕಾರಣ ಮರಾಠಿ ಮತ್ತು ತೆಲುಗು ಭಾಷೆ ಮಾತನಾಡುವ ಜನ ಹೆಚ್ಚಿದ್ದಾರೆ. ಹಾಗಾಗಿ ಇಲ್ಲಿ ಕನ್ನಡದ ಬೆಳವಣಿಗೆ ಬಹಳಷ್ಟು ಕಷ್ಟದ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಡಾ.ಚನ್ನಬಸವ ಪಟ್ಟದೇವರು ನಿಜಾಮರ ವಿರೋಧದ ನಡುವೆಯೂ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿ ಈ ಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ ಎಂದು ಸ್ಮರಿಸಿದ್ದರು.
ನಾನು ಮೊದಲ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳು ಕಾಣಿಸುತ್ತಿರಲಿಲ್ಲ. ನಂತರ ಔರಾದ್(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿನ ಎಲ್ಲ ಗ್ರಾಮಗಳಲ್ಲಿ ಕನ್ನಡ ಶಾಲೆಗಳನ್ನು ತಂದು ಕನ್ನಡ ಕಲಿಕೆಯನ್ನು ಆರಂಭಿಸಲಾಗಿದೆ. ನಾನು ಕನ್ನಡದ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ಸಹಕರಿಸುತ್ತಾ ಬರುತ್ತಿದ್ದೇನೆ. ಸಚಿವನಾಗಿದ್ದ ಸಂದರ್ಭದಲ್ಲಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಜಿಲ್ಲಾ ಕನ್ನಡ ಭವನ ನಿರ್ಮಿಸಿದ್ದೇನೆ ಎಂದು ಹೇಳಿದರು.
ಕನ್ನಡ ನಾಡಿನಲ್ಲಿರುವ ಎಲ್ಲರೂ ಕನ್ನಡವನ್ನು ಕಲಿಯಬೇಕು. ಕನ್ನಡ ಮಾತನಾಡಬೇಕು. ಕನ್ನಡದಲ್ಲಿಯೇ ವ್ಯವಹರಿಸಬೇಕು. ಬೇರೆ ಭಾಷೆಗಳಿಗೆ ಗೌರವಿಸುವುದು ತಪ್ಪಲ್ಲ, ಆದರೆ ಕನ್ನಡವನ್ನು ಪ್ರೋತ್ಸಾಹಿಸಬೇಕು. ಕನ್ನಡದ ನೆಲ, ಜಲ, ಭಾಷೆಯನ್ನು ಪ್ರೀತಿಸಬೇಕು. ಎಲ್ಲರಲ್ಲಿಯೂ ಕನ್ನಡಾಭಿಮಾನ ಬೆಳೆದರೆ ಕನ್ನಡ ತಾನಾಗಿಯೇ ಉಳಿಯುತ್ತದೆ ಎಂದು ತಿಳಿಸಿದರು.
ಔರಾದ್(ಬಿ) ತಹಶೀಲ್ದಾರ್ ಮಹೇಶ್ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು. ಕಲಬುರಗಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅವರು ವಿಶೇಷ ಉಪನ್ಯಾಸ ನೀಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿದರು. ಇದೇ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ್, ಆರಕ್ಷಕ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ್, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.