×
Ad

ಮತಗಳ್ಳತನದ ಮೂಲಕ ಕೇಂದ್ರ ಸರಕಾರ ಕಾನೂನು ಬಾಹಿರವಾಗಿ ರಚನೆಯಾಗಿದೆ : ಸಚಿವ ಈಶ್ವರ್ ಖಂಡ್ರೆ

Update: 2025-10-31 18:36 IST

ಬೀದರ್ : ಮತಗಳ್ಳತನದ ಮೂಲಕ ಜನರನ್ನು ಮರಳು ಮಾಡಿ ಹಾಗೂ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡು ಅವರು ಕೇಂದ್ರ ಸರಕಾರ ರಚಿಸಿಕೊಂಡಿದ್ದಾರೆ. ಹಾಗಾಗಿ ಕೇಂದ್ರ ಸರಕಾರವು ಕಾನೂನು ಬಾಹಿರವಾಗಿ ರಚನೆಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಆರೋಪಿಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ನೇತೃತ್ವ ನಮ್ಮ ನಾಯಕ ರಾಹುಲ್ ಗಾಂಧಿ ಅವರು ವಹಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಜನ ಬೆಂಬಲ ಸಿಗುತ್ತಿದೆ. ಅವರು ಮತಗಳ್ಳತನದ ಸಂಘರ್ಷ ಪ್ರಾರಂಭ ಮಾಡಿದ್ದಾರೆ. ಬಿಹಾರ ಮತ್ತು ಇಡೀ ದೇಶದ ಯುವಕರು ರಾಹುಲ್ ಗಾಂಧಿ ಅವರಿಗೆ ಬೆಂಬಲಿಸುತ್ತಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ, ಕಾಂಗ್ರೆಸ್ ಪಾರ್ಟಿ ಹಾಗೂ ಇಂಡಿಯಾ ಮೈತ್ರಿಕೂಟದ ಅಲೆ ಎದ್ದಿದೆ ಎಂದರು.

ಬಿಜೆಪಿಯವರು ಸುಳ್ಳು ಅಶ್ವಾಸನೆ ನೀಡುವ ಮೂಲಕ ಜನರಿಗೆ ವಿಶ್ವಾಸಘಾತ ಮಾಡಿದ್ದಾರೆ. ಅವರು ಹೇಳಿದ ಒಂದು ಅಶ್ವಾಸನೆ ಕೂಡ ಪೂರ್ಣಗೊಳಿಸಲಿಲ್ಲ. ಉದ್ಯೋಗ ನೀಡುವುದಾಗಿ ಹೇಳಿ ಉದ್ಯೋಗ ನೀಡಲಿಲ್ಲ. ಬಿಹಾರಕ್ಕೆ 1 ಲಕ್ಷ ಕೋಟಿ ರೂ. ಗೂ ಅಧಿಕ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಆದರೆ ಪ್ಯಾಕೇಜ್ ನೀಡಲಿಲ್ಲ. ಬಿಹಾರದಲ್ಲಿ ನಿರುದ್ಯೋಗವಿದೆ. ಅಲ್ಲಿನ ಜನ ಇನ್ನು ಕೂಡ ವಲಸೆ ಹೋಗುತ್ತಾರೆ. ಇದೆಲ್ಲ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.

ಬಿಹಾರ ರಾಜ್ಯ ವೇಗದ ಗತಿಯಲ್ಲಿ ಬದಲಾವಣೆಯಾಗಬೇಕಾದರೆ ಅಲ್ಲಿ ಇಂಡಿಯಾ ಮೈತ್ರಿಕೂಟ ಆಡಳಿತಕ್ಕೆ ಬರುವುದು ತುಂಬಾ ಅವಶ್ಯಕವಿದೆ. ನ.14ರ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಬಿಹಾರ್ ಚುನಾವಣೆಯ ಫಲಿತಾಂಶ ಬರಲಿದ್ದು, ಅಲ್ಲಿ ಇಂಡಿಯಾ ಮೈತ್ರಿಕೂಟ ಖಚಿತವಾಗಿ ಗೆಲ್ಲಲಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಜನರು ಜಾಗೃತರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಬಯಸಿದರೆ ಏನು ಕೂಡ ಬದಲಾವಣೆಯಾಗುತ್ತದೆ. ಇಡೀ ದೇಶದಾದ್ಯಂತ ಬದಲಾವಣೆ ಬರುತ್ತದೆ ಎಂದು ಅವರು ಭವಿಷ್ಯ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News