ಬೀದರ್ | ವಿವಿಧ ಕಳ್ಳತನ ಪ್ರಕರಣಗಳ ಆರೋಪಿಗಳ ಬಂಧನ, ಲಕ್ಷಾಂತರ ಮೌಲ್ಯದ ವಸ್ತುಗಳು ವಶಕ್ಕೆ : ಎಸ್ಪಿ ಪ್ರದೀಪ್ ಗುಂಟಿ
ಸಾಂದರ್ಭಿಕ ಚಿತ್ರ
ಬೀದರ್ : ಗಾಂಧಿ ಗಂಜ್, ಔರಾದ್ ಹಾಗೂ ಚಿಂತಾಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿದ್ದು, ಕಳ್ಳತನವಾದ ವಸ್ತುಗಳು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಆದರ್ಶ ಕಾಲೋನಿಯಲ್ಲಿ ಫೋಟೋ ಸ್ಟುಡಿಯೊ ಮತ್ತು ಮೊಬೈಲ್ ಅಂಗಡಿಯನ್ನು ಕಳ್ಳತನ ಮಾಡಿ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಫೋಟೋ ಸ್ಟಡಿಯೊದಲ್ಲಿನ ಕಳ್ಳತನವಾದ 60 ಸಾವಿರ ರೂ. ಬೆಲೆ ಬಾಳುವ ಒಂದು ಐ ಫೋನ್, 2 ಲಕ್ಷ ರೂ. ಬೆಲೆ ಬಾಳುವ ಎರಡು ಕ್ಯಾಮೆರಾ, 10 ಸಾವಿರ ರೂ. ಬೆಲೆ ಬಾಳುವ ಒಂದು ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ ಅಂಗಡಿಯಲ್ಲಿನ ಕಳ್ಳತನವಾದ 25 ಸಾವಿರ ರೂ. ಬೆಲೆ ಬಾಳುವ ಒಂದು ಲ್ಯಾಪ್ ಟಾಪ್, 40 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಎಸ್ಸೆಸರಿಜ್, 10 ಸಾವಿರ ರೂ. ಬೆಲೆ ಬಾಳುವ ಒಂದು ಟ್ಯಾಬ್ ಹಾಗೂ ಕೃತ್ಯಕ್ಕೆ ಉಪಯೋಗಿಸಿಕೊಂಡ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಔರಾದ್ ಠಾಣೆಯ ವ್ಯಾಪ್ತಿಯ ಕಿರಾಣಿ ಅಂಗಡಿಯ ಗೋದಾಮಿನಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, 4 ಲಕ್ಷ ರೂ. ಬೆಲೆ ಬಾಳುವ ಟೆಂಪೋ ವಾಹನ ಮತ್ತು ಸುಮಾರು 1 ಲಕ್ಷ 39 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಮನೆ ಕಳ್ಳತನ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 8 ಲಕ್ಷ 59 ಸಾವಿರ ಬೆಲೆ ಬಾಳುವ 87 ಗ್ರಾಂ ಚಿನ್ನಾಭರಣ, 8,800 ರೂ. ಬೆಲೆ ಬಾಳುವ 80 ಗ್ರಾಂ ಬೆಳ್ಳಿ ಆಭರಣ ಮತ್ತು 2 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ್, ಶಿವಾನಂದ್ ಪವಾಡಶೆಟ್ಟಿ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.