ಛಲವಾದಿ ನಾರಾಯಣಸ್ವಾಮಿ ಅವರ ನಾಲಿಗೆಗೂ, ಮೆದುಳಿಗೂ ಕನೆಕ್ಷನ್ ಇಲ್ಲ : ಚಂದ್ರಶೇಖರ್ ಪಾಟೀಲ್
ಬೀದರ್ : ಛಲವಾದಿ ನಾರಾಯಣಸ್ವಾಮಿ ಅವರ ನಾಲಿಗೆ ಮತ್ತು ಮೆದುಳಿಗೆ ಕನೆಕ್ಷನ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವರು ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿಯವರು ವಿರೋಧ ಪಕ್ಷದ ನಾಯಕರಾಗಿದ್ದು, ನಾವು ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ವಿಪಕ್ಷ ನಾಯಕನ ಕೆಲಸವಾಗಿದೆ. ಆದರೆ ನಾರಾಯಣಸ್ವಾಮಿ ಅವರು ಮೂಳೆ ಇಲ್ಲದ ನಾಲಿಗೆ ಇದೆ ಎಂದು ಏನೆಲ್ಲಾ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂಸದ ಸಾಗರ್ ಖಂಡ್ರೆ ಅವರು ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರು ಒಂದು ಜವಾಬ್ದಾರಿ ಸ್ಥಾನದಲ್ಲಿ ಕುಳಿತು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ವಿರೋಧ ಪಕ್ಷದವರಾಗಿ ಪ್ರಶ್ನೆ ಕೇಳಬೇಕೇ ವಿನಃ ಈ ರೀತಿಯ ಹೇಳಿಕೆ ನೀಡಬಾರದು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಭೀಮಶೇನರಾವ್ ಶಿಂಧೆ, ಅರವಿಂದ ಅರಳಿ, ಅಮೃತರಾವ್ ಚಿಮಕೋಡೆ ಹಾಗೂ ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಸೇರಿದಂತೆ ಕಾಂಗ್ರೆಸ್‌ನ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.