"ಹಣ ನೀಡದಿದ್ದರೆ ನಿಮ್ಮ ವಿಡಿಯೋ ಬಿಡುಗಡೆಗೊಳಿಸುತ್ತೇನೆ"; ಶಾಸಕ ಪ್ರಭು ಚೌವ್ಹಾಣ್ ರಿಗೆ ಬೆದರಿಕೆ ಸಂದೇಶ
ಪ್ರಕರಣ ದಾಖಲು
ಶಾಸಕ ಪ್ರಭು ಚೌವ್ಹಾಣ್
ಬೀದರ್ : 30 ಸಾವಿರ ರೂ. ಹಣ ನೀಡಬೇಕು, ಇಲ್ಲದಿದ್ದರೆ ನಿಮ್ಮ ವಿಡಿಯೋ ಬಿಡುಗಡೆಗೊಳಿಸುತ್ತೇನೆ ಎಂದು ಅಪರಿಚಿತರಿಂದ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ವಾಟ್ಸಾಪ್ ಸಂದೇಶ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಶಾಸಕ ಪ್ರಭು ಚೌವ್ಹಾಣ್ ಅವರ ಸಂಬಂಧಿ ಮುರಳಿಧರ್ ಎಂಬವರು ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?:
ಶಾಸಕರ ಮೊಬೈಲ್ ಸಂಖ್ಯೆಗೆ ಸೆ. 2 ರಂದು ಒಂದು ವಾಟ್ಸಾಪ್ ಸಂದೇಶ ಬಂದಿದೆ. ಅದರಲ್ಲಿ 30 ಸಾವಿರ ರೂ. ನೀಡಬೇಕು, ಇಲ್ಲದಿದ್ದರೆ ಯುಟ್ಯೂಬ್ ನಲ್ಲಿ ನಿಮ್ಮ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಬರೆದಿತ್ತು. ನಮ್ಮವರೇ ಯಾರಾದರೂ ಸಂದೇಶ ಕಳುಹಿಸಿರಬಹುದು ಎಂದು ಸುಮ್ಮನಿದ್ದರು. ಆದರೆ ಸೆ. 7 ರಂದು ಶಾಸಕ ಪ್ರಭು ಚೌವ್ಹಾಣ್ ಹಾಗೂ ಯುವತಿಯೋರ್ವಳ ಎಡಿಟ್ ಮಾಡಿದ ವಿಡಿಯೋ ಕಳುಹಿಸಿ ಶಾಸಕರ ಹೆಸರು ಕೆಡಿಸಿದ್ದಾರೆ. ಶಾಸಕರ ಹೆಸರು ಕೆಡಿಸುವ ಉದ್ದೇಶದಿಂದ ಮೂರು ಬೇರೆ ಬೇರೆ ನಂಬರ್ ಗಳಿಂದ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಬೆದರಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.