ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ : ಸಚಿವ ಸಂತೋಷ್ ಲಾಡ್
ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ
ಬೀದರ್ : ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದರು.
ಮಂಗಳವಾರ ನಗರದ ಘಾಳೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸಾರಿಗೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೀದರ್ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ದುಡಿಯುವ ಜನರಲ್ಲಿ ಶೇ.85ರಷ್ಟು ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ. ವಿವಿಧ ವಲಯದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ' ಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ 101 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು, ಸುಮಾರು 35 ಲಕ್ಷ ಕಾರ್ಮಿಕರು ಒಳಗೊಂಡಿದ್ದಾರೆ. ಅವರಿಗೆ ಉಚಿತವಾಗಿ ನೊಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ 59,493 ಕಾರ್ಮಿಕರು ನೊಂದಾಯಿಸಿದ್ದು, ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದಲ್ಲಿ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ 4 ಲಕ್ಷ ರೂ. ವರೆಗೆ ವಿಮಾ ಸೌಲಭ್ಯ ನೀಡಲಾಗುವುದು. ಆಶಾದೀಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಉದ್ಯೋಗ ನೀಡಿದಲ್ಲಿ ಶೇ.50ರಷ್ಟು ವೇತನ ಕಾರ್ಮಿಕ ಇಲಾಖೆ ಕಡೆಯಿಂದ ನೀಡಲಾಗುವುದು ಎಂದು ಅವರು ತಿಳಿಸಿದರು.
ಮೋಟಾರು ಸಾರಿಗೆ ಹಾಗೂ ಸಂಬಂಧಿತ ಕಾರ್ಮಿಕರಿಗೆ ಮತ್ತು ಸಿನಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಯಾವ ರೀತಿ ಸಂಸ್ಥೆ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಲಾಗುತ್ತದೆಯೋ, ಅದೇ ರೀತಿಯಲ್ಲಿ ಇಡೀ ಕರ್ನಾಟಕದಲ್ಲಿ ನೇಮಿಸಲು ಯೋಚಿಸಲಾಗುವುದು. ಹಾಗೆಯೇ ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ) ಅಧಿನಿಯಮ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಮುಂಬರುವ ದಿನಗಳಲ್ಲಿ ಸಿನಿಮಾ, ನಾಟಕ ಹಾಗೂ ಇತರ ಕಲಾವಿದ ಮತ್ತು ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣಕ್ಕಾಗಿ ಸಿನಿ ಬಿಲ್ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾದ ಮೇಲೆ ಶ್ರಮೀಕರಿಗಾಗಿ ಅನೇಕ ಕ್ರಾಂತಿಕಾರಿ ಯೋಜನೆಗಳು ಜಾರಿಗೆ ತಂದು ಕಾರ್ಮಿಕರ ಬಾಳಿಗೆ ಬೆಳಕಾಗಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣ ಮಾಡುವ ಕಾರ್ಯ ಅವರು ಮಾಡಿದ್ದಾರೆ. ಈಗಾಗಲೇ ವಸತಿ ಶಾಲೆಗೆ ಖಾನಾಪೂರದಲ್ಲಿ ಸ್ಥಳ ಸೂಚಿಸಲಾಗಿದೆ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಸಂತೋಷ್ ಲಾಡ್ ಅವರು ಬಡವರ, ದಲಿತರ, ಕಾರ್ಮಿಕರ ಬಗ್ಗೆ ಅಪಾರವಾದ ಪ್ರೀತಿ ಉಳ್ಳವರಾಗಿದ್ದಾರೆ. ಸಾಮಾಜಿಕ ನ್ಯಾಯ, ಸಮ ಸಮಾಜದ ನಿರ್ಮಾಣ ಮಾಡಲು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಸದಾ ಶ್ರಮಿಸುವರು ಎಂದರು.
ಕಾರ್ಯಕ್ರಮದಲ್ಲಿ ಆಶಾದೀಪ ಯೋಜನೆಯಡಿ ವೇತನ ಮರುಪಾವತಿ ಚೆಕ್ ವಿತರಣೆ, ಖಾಸಗಿ ವಾಹನ ಚಾಲಕರ ಅಪಘಾತ ಮರಣ ಪರಿಹಾರ ಧನ ಸಹಾಯ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಅಧ್ಯಕ್ಷ ಬಾಬು ಹೊನ್ನನಾಯಕ್, ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬಾಬು ಜಗಜೀವನರಾಂ ನಿಗಮದ ಅಧ್ಯಕ್ಷ ನಾಗರಾಜ್ ಮುಂಡರಗಿ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮೊಹಮದ್ ಮೋಸಿನ್, ಕಾರ್ಮಿಕ ಆಯುಕ್ತ ಹಾಗೂ ರಾಜ್ಯ ವಿಮಾ ಯೋಜನಾ ವೈದ್ಯಕೀಯ ಆಯುಕ್ತರು ಎಚ್.ಎನ್. ಗೋಪಾಲಕೃಷ್ಣ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ್, ಜಂಟಿ ಕಾರ್ಮಿಕ ಆಯುಕ್ತ ಹಾಗೂ ಜಂಟಿ ಕಾರ್ಯದರ್ಶಿ ಎಸ್.ಬಿ. ರವಿಕುಮಾರ್ ಹಾಗೂ ಕಲಬುರಗಿ ಪ್ರಾದೇಶಿಕ ಸಹಾಯಕ ಆಯುಕ್ತ ಮಹಮ್ಮದ್ ಬಶೀರ್ ಅನ್ಸಾರಿ ಸೇರಿದಂತೆ ಇತರೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.