ಔರಾದ್ (ಬಿ) ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು ಕಾಂಗ್ರೆಸ್ ಕೊಡುಗೆಯಾಗಿದೆ : ಭೀಮಸೇನರಾವ್ ಶಿಂಧೆ
ಔರಾದ್: ನಗರದ ಪಟ್ಟಣ ಪಂಚಾಯತಿಯನ್ನು ಪುರಸಭೆ ಮೇಲ್ದರ್ಜೆಗೆ ಗೇರಿಸಲು ಕಾಂಗ್ರೆಸ್ ಸರಕಾರ ನಿರ್ಣಯ ಕೈಗೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ್ ಶಿಂಧೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಅವಧಿಯಲ್ಲಿ ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ನಾನು ಸರಕಾರದ ಗಮನಕ್ಕೆ ತಂದಿದ್ದೇನೆ. ಅದರ ಪರಿಣಾಮವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜನರ ಬೇಡಿಕೆಗೆ ಸ್ಪಂದಿಸಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರ ಪ್ರಯತ್ನದ ಫಲವಾಗಿ ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ಆಗದ ಕೆಲಸಗಳನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಕೆಲವು ಮಂದಿ ಎಲ್ಲವೂ ನಾನೇ ಮಾಡುತ್ತಿದ್ದೇನೆ ಎಂದು ಪ್ರಚಾರ ಮಾಡುತ್ತಿದ್ದಾರೆ, ಆದರೆ ನಿಜವೇ ಆಗಿರುವುದಿಲ್ಲ. ಪಂಚಾಯತಿಯಲ್ಲಿ ಈ ಕೆಲಸಗಳು ಸಾರ್ವಜನಿಕರ ಗಮನದಲ್ಲಿವೆ ಮತ್ತು ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರ ಸಹಯೋಗದಿಂದ ನಾವು ಸರಕಾರದ ಮೇಲೆ ಒತ್ತಡ ಹಾಕಿದ್ದೇವೆ. ಔರಾದ್ ಶಾಸಕರು ಬಿಜೆಪಿ ಅವಧಿಯಲ್ಲಿ ಇದನ್ನು ಮಾಡಿಲ್ಲ. ಪುರಸಭೆ ಮೇಲ್ದರ್ಜೆಗೆ ಗೇರುವುದನ್ನು ಕಾಂಗ್ರೆಸ್ ಸರಕಾರದ ಕೊಡುಗೆ ಎಂದು ಪರಿಗಣಿಸಬೇಕು. ಬಿಜೆಪಿಯವರು ಅಥವಾ ಹಿಂದಿನ ಸರಕಾರ ಮಾಡಿದ ಕೆಲಸ ಇದಲ್ಲ ಎಂದು ಹೇಳಿದರು.