ಹೃದಯಾಘಾತದ ಕುರಿತು ಎಚ್ಚರಿಕೆ, ಜಾಗೃತಿ ಮೂಡಿಸಿ : ಸಂಸದ ಸಾಗರ್ ಖಂಡ್ರೆ
ಬೀದರ್ : ಒತ್ತಡದ ಬದುಕು, ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರಲ್ಲಿ ಎದೆನೋವು, ಹೃದಯಾಘಾತ ತಡೆಯಲು ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರಗಳು ಹಮ್ಮಿಕೊಳ್ಳುವಂತೆ ಸಂಸದ ಸಾಗರ್ ಖಂಡ್ರೆ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜರುಗಿದ ದಿಶಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ದಿನನಿತ್ಯದ ಒತ್ತಡದ ಬದುಕು, ಫಾಸ್ಟ್ ಫುಡ್ ಆಹಾರ ಹಾಗೂ ಬದಲಾದ ಜೀವನ ಶೈಲಿಯ ಹಿನ್ನೆಲೆಯಲ್ಲಿ ಹೃದಯಾಘಾತ ಕಂಡುಬರುತ್ತಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುಧಾರಿತ ಜೀವನ ಶೈಲಿ ಬಗ್ಗೆ ಆರೋಗ್ಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಔಷಧಿಗಳು ಲಭ್ಯತೆ ಇರಬೇಕು. ಸ್ಥಳೀಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಬೇಕು. ಸಾರ್ವಜನಿಕರು ಆರೋಗ್ಯ ಸಮಸ್ಯೆಗಳು ದಾಖಲಿಸಲು ಆನ್‍ಲೈನ್ ಯೋಜನೆ ರೂಪಿಸಬೇಕು. ಅಂಬುಲೆನ್ಸ್ ಚಾಲಕರ ಕೊರತೆ ಇನ್ನೊಂದು ವಾರದಲ್ಲಿ ಬಗೆಹರಿಸುವಂತೆ ಡಿಎಚ್ಓ ಡಾ.ನಿರಗುಡೆ ಅವರಿಗೆ ತಿಳಿಸಿದರು.
ಔಷಧಿ ಅಂಗಡಿಗಳಲ್ಲಿ ನಶೆ ಬರುವ, ಮತ್ತೇರಿಸುವ ಔಷಧಿಗಳ ಮಾರಾಟ ಕುರಿತು ಡ್ರಗ್ಸ್ ಕಂಟ್ರೋಲರ್ ಕ್ರಮ ಕೈಗೊಳ್ಳಬೇಕು. ಅಲ್ಲದೇ ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ತಿಳಿಸಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿದರು.
ಸಭೆಯಲ್ಲಿ ದಿಶಾ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ, ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.