ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದನ್ನು ನಾವು ಖಂಡಿಸುತ್ತೇವೆ : ವಿಷ್ಣುವರ್ಧನ್ ವಾಲ್ದೊಡ್ಡಿ
ಬೀದರ್ : ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿ, ಮನಬಂದಂತೆ ಅವರ ತಾಯಿ, ಅಕ್ಕ ತಂಗಿಯರನ್ನು ಹೀಯಾಳಿಸಿ ಬಯ್ಯಲಾಗಿದೆ. ಇದನ್ನು ನಾವು ಬಲವಂತವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ಭೀಮ್ ಸೇನೆಯ ರಾಜ್ಯ ಕಾರ್ಯಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಸ್ಥಳಗಳಲ್ಲಿ ಆರೆಸ್ಸೆಸ್ ಶಾಖೆಯ ಚಟುವಟಿಕೆ ಮಾಡುವುದಕ್ಕೆ ಬಿಡಬೇಡಿ ಎಂದು ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯಿಂದ ಆರೆಸ್ಸೆಸ್ ನವರಿಗೆ ನೋವುಂಟಾಗಿದ್ದರೆ, ಅದನ್ನು ಧಿಕ್ಕರಿಸಿ ಪ್ರತಿಭಟನೆ ಮಾಡುವ ಮೂಲಕ ಖಂಡಿಸಬೇಕಿತ್ತು. ಆದರೆ ಅವರನ್ನು ಕರೆ ಮಾಡಿ ಜೀವ ಬೆದರಿಕೆ ಹಾಕುವುದು, ಬೈಯ್ಯುವುದು ಸರಿಯಲ್ಲ. ಸಚಿವರನ್ನೇ ಅವರು ಈ ರೀತಿ ಮಾಡುತ್ತಿದ್ದಾರೆ ಎಂದ ಮೇಲೆ ಜನಸಾಮಾನ್ಯರ ಪರಿಸ್ಥಿತಿ ಹೇಗಾಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೆಸ್ಸೆಸ್ ಇಡೀ ದೇಶದಲ್ಲಿಯೇ ದೊಡ್ಡ ಸಂಘಟನೆಯಾಗಿದೆ ಎನ್ನುತ್ತಾ, ನಾವು ದೇಶಭಕ್ತರು ಎಂದು ಅವರು ಹೇಳಿಕೊಳ್ಳುತ್ತಾರೆ. ದೇಶಭಕ್ತರೆಂದು ಹೇಳಿಕೊಳ್ಳುವ ಇವರು, ಸಿಜೆಐ ಮೇಲೆ ಶೂ ಎಸೆದಾಗ ಎಲ್ಲಿದ್ದರು, ಒಬ್ಬರಾದರೂ ಖಂಡಿಸಿದ್ದರಾ ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯದ ಗೃಹ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದೇನಿಸುತ್ತದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಇದರ ಬಗ್ಗೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಂದ ಗೃಹ ಇಲಾಖೆ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದರೆ ದಯವಿಟ್ಟು ಅದಕ್ಕೆ ಅವರು ರಾಜೀನಾಮೆ ನೀಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತರು ಆರೆಸ್ಸೆಸ್ ವಿರುದ್ಧ ಬರೆದರೆ ಅವರಿಗೂ ಜೀವ ಬೆದರಿಕೆ ಹಾಕುತ್ತಾರೆ. ಇವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನಾವು ಖಂಡಿಸುತ್ತೇವೆ. ಒಂದು ವೇಳೆ ಆರೆಸ್ಸೆಸ್ ನವರು ಸುಧಾರಿಸದಿದ್ದರೆ ಇದು ಉಗ್ರ ಹೋರಾಟಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರುಷೋತ್ತಮ್, ವಿಜಯಕುಮಾರ್ ಭಾವಿಕಟ್ಟಿ ಮತ್ತು ಸಂದೀಪ್ ಇದ್ದರು.