×
Ad

ಗೋಹತ್ಯೆ ತಡೆಯುವ ನೆಪದಲ್ಲಿ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರ ಪ್ರವೇಶ : ಪುನೀತ್ ಕೆರೆಹಳ್ಳಿ ವಿರುದ್ಧ ಗೃಹ ಸಚಿವರು, ಐಜಿಪಿಗೆ ದೂರು

Update: 2025-06-08 22:49 IST

PC : x/@Puneeth74353549

ಬೆಂಗಳೂರು : ಗೋಹತ್ಯೆಯನ್ನು ತಡೆಯುವ ನೆಪದಲ್ಲಿ ನಗರದ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸಿರುವ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಕೀಲರು, ಸಾಮಾಜಿಕ ಕಾರ್ಯಕರ್ತರ ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ಅವರಿಗೆ ದೂರು ಸಲ್ಲಿಸಿದೆ.

ಜೂ.7ರಂದು ಬಕ್ರೀದ್ ಹಬ್ಬಕ್ಕೂ ಮುಂಚಿತವಾಗಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ನಗರದ ಟ್ಯಾನರಿ ರಸ್ತೆ, ಅಹ್ಮದ್‍ನಗರ ಮತ್ತು ಶಿವಾಜಿನಗರದಲ್ಲಿರುವ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸಿದ್ದಾರೆ. ಇಂತಹ ನಡೆಯು ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಮರ್ಥ್ಯ ವನ್ನು ಹೊಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಕಾಂಗ್ರೆಸ್ ಸರಕಾರದಿಂದಾಗಿ ಮುಸ್ಲಿಮರು ಗೋಹತ್ಯೆ ಮಾಡಲು ಸಾಧ್ಯವಾಗಿದೆ’ ಎಂದು ಹೇಳಿಕೆ ನೀಡುವ ಮೂಲಕ ಪುನೀತ್ ಕೆರೆಹಳ್ಳಿ ಅವರು ಆಧಾರ ರಹಿತವಾಗಿ ಆರೋಪಿಸುತ್ತಾರೆ. ಇದ್ರೀಸ್ ಪಾಷಾ ಕೊಲೆ ಪ್ರಕರಣದ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ, ಬೆಂಗಳೂರಿನ ಮುಸ್ಲಿಮರ ನೆರೆಹೊರೆಗಳಿಂದ ಹಸುಗಳನ್ನು ‘ರಕ್ಷಿಸುತ್ತಿದ್ದೇನೆ’ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಹೇಳಿಕೆಗಳು ಈದ್ ಅಲ್-ಅಧಾ ಸಮಯದಲ್ಲಿ ನಗರದಲ್ಲಿ ಕೋಮು ಉದ್ವಿಗ್ನತೆಯ ಭಯವನ್ನು ಹುಟ್ಟುಹಾಕಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಬಿಎನ್‍ಎಸ್‍ಎಸ್ ಅಥವಾ ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ದೂರಿನ ಪತ್ರದಲ್ಲಿ ವಕೀಲರಾದ ಬಿ.ಟಿ.ವೆಂಕಟೇಶ್, ಕ್ಲಿಫ್ಟನ್ ಡಿ'ರೊಜಾರಿಯೊ, ಆರೋಗ್ಯ ತಜ್ಞೆ ಡಾ.ಸಿಲ್ವಿಯಾ ಕಾರ್ಪಗಮ್ ಮತ್ತು ಸಾಮಾಜಿಕ ಕಾರ್ಯಕರ್ತೆ ಸೈಯದ್ ತೌಸಿಫ್ ಮಸೂದ್ ಮತ್ತು ಜಿಯಾ ನೊಮಾನಿ ಸೇರಿದಂತೆ ಸಹಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News