ಅಮೆರಿಕ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಟ್ರಂಪ್ ಸುದ್ದಿಗೋಷ್ಠಿ; ಮಹತ್ವದ ಘೋಷಣೆ ಸಾಧ್ಯತೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಮಾ. 9: ಅಮೆರಿಕ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದ್ದಿಗೋಷ್ಠಿ ನಡೆಸುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಸಂಜೆ 5:30ಕ್ಕೆ ನಡೆಯಲಿರುವ ಈ ಸುದ್ದಿಗೋಷ್ಠಿ ಭಾರತೀಯ ಸಮಯದ ಪ್ರಕಾರ ಮಾರ್ಚ್ 10ರಂದು ಮುಂಜಾನೆ 3 ಗಂಟೆಗೆ ಆರಂಭವಾಗಲಿದೆ.
“ಇಂದು ಅನೇಕ ಪ್ರಮುಖ ಸಭೆಗಳು ಮತ್ತು ದೂರವಾಣಿ ಕರೆಗಳು ನಡೆಯುತ್ತಿವೆ,” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ತಿಳಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯ ವಿಷಯವೇನು ಎಂಬುದನ್ನು ಅಧ್ಯಕ್ಷರು ಸ್ಪಷ್ಟಪಡಿಸಿಲ್ಲ. ಆದರೆ ಅಮೆರಿಕದ ಷೇರು ಮಾರುಕಟ್ಟೆ ಮುಕ್ತಾಯವಾದ ಬಳಿಕವೇ ಕಾರ್ಯಕ್ರಮವನ್ನು ನಿಗದಿಪಡಿಸಿರುವುದು ಗಮನಾರ್ಹವಾಗಿದೆ. ತೈಲ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಅಮೆರಿಕದ ಷೇರು ಮಾರುಕಟ್ಟೆಗಳು ಕುಸಿದಿವೆ.
ಇದರ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ಮಾರುಕಟ್ಟೆಗಳಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಸಂಘರ್ಷದ ಪರಿಣಾಮವಾಗಿ ವಿದೇಶಿಯರು ವ್ಯಾಪಾರ ಕೇಂದ್ರಗಳಿಂದ ಪಲಾಯನ ಮಾಡುತ್ತಿರುವ ವರದಿಗಳು ಕೇಳಿಬಂದಿವೆ. ಮಿಲಿಟರಿ ನೆಲೆಗಳು, ಸರ್ಕಾರಿ ಕಟ್ಟಡಗಳು, ತೈಲ ಹಾಗೂ ನೀರಿನ ಆಗರಗಳು, ಹೋಟೆಲ್ ಗಳು ಮತ್ತು ಕನಿಷ್ಠ ಒಂದು ಶಾಲೆ ಸೇರಿದಂತೆ ಹಲವು ಸ್ಥಳಗಳಿಗೆ ಬಾಂಬ್ ದಾಳಿಗಳು ನಡೆದಿದ್ದು, ಲಕ್ಷಾಂತರ ಜನರು ಆಶ್ರಯ ಪಡೆಯುವಂತಾಗಿದೆ ಎಂದು Aljazeera ವರದಿ ಮಾಡಿದೆ.