×
Ad

ಇರಾನ್ ಸಂಪೂರ್ಣವಾಗಿ ಸೋಲುವವರೆಗೆ ದಾಳಿ ಮುಂದುವರಿಕೆ: ಡೊನಾಲ್ಡ್ ಟ್ರಂಪ್ ಘೋಷಣೆ

‘ಆಪರೇಷನ್ ಮಿಡ್ನೈಟ್ ಹ್ಯಾಮರ್’ | ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ

Update: 2026-03-10 04:11 IST

ಡೊನಾಲ್ಡ್ ಟ್ರಂಪ್ (Photo: PTI)

ಫ್ಲೋರಿಡಾ: ಇರಾನ್ ಸಂಪೂರ್ಣವಾಗಿ ಹಾಗೂ ನಿರ್ಣಾಯಕವಾಗಿ ಸೋಲುವವರೆಗೆ ಅಮೆರಿಕದ ದಾಳಿಗಳು ಮುಂದುವರಿಯಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಕುರಿತು ಅವರು ಫ್ಲೋರಿಡಾದ ಡೋರಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಯುದ್ಧ ಆರಂಭವಾದಾಗ ಇದನ್ನು “ಅಲ್ಪಾವಧಿಯ ಯುದ್ಧ” ಎಂದು ಹೇಳಿದ್ದ ಟ್ರಂಪ್, ಬಳಿಕ ರಿಪಬ್ಲಿಕನ್ ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ವೇಳೆ ಯುದ್ಧ ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ್ದರು. “ಕೆಲವರನ್ನು ತೊಡೆದುಹಾಕಬೇಕೆಂದು ನಾವು ಭಾವಿಸಿದ್ದರಿಂದಲೇ ಈ ಕ್ರಮ ಕೈಗೊಂಡಿದ್ದೇವೆ,” ಎಂದು ಅವರು ಹೇಳಿದರು.

ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳು ಕಳೆದ ಹತ್ತು ದಿನಗಳಿಂದ ಮುಂದುವರಿದಿದ್ದು, ಈ ಅವಧಿಯಲ್ಲಿ 1,200 ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

“ನಾವು ಈಗಾಗಲೇ ಹಲವು ರೀತಿಯಲ್ಲಿ ಗೆಲುವು ಸಾಧಿಸಿದ್ದೇವೆ. ಆದರೆ ಯುದ್ಧವನ್ನು ಇನ್ನೂ ಸಂಪೂರ್ಣವಾಗಿ ಗೆದ್ದಿಲ್ಲ,” ಎಂದು ಟ್ರಂಪ್ ಹೇಳಿದರು. ಇದೇ ವೇಳೆ ಇರಾನ್ ವಿರುದ್ಧದ ಯುದ್ಧವು ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. ಈ ವಾರದಲ್ಲೇ ಯುದ್ಧ ಮುಗಿಯುವ ಸಾಧ್ಯತೆ ಇದೆಯೇ ಎಂದು ವರದಿಗಾರರು ಪ್ರಶ್ನಿಸಿದಾಗ, “ಇಲ್ಲ. ಆದರೆ ಅದು ಬೇಗ ಅಂತ್ಯಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದರು.

ಕಳೆದ ಒಂಭತ್ತು ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಜಗತ್ತು ಕಂಡ ಅತ್ಯಂತ ಶಕ್ತಿಶಾಲಿ ಹಾಗೂ ಸಂಕೀರ್ಣ ಮಿಲಿಟರಿ ದಾಳಿಗಳಲ್ಲಿ ಕೆಲವನ್ನು ನಡೆಸಿವೆ ಎಂದು ಟ್ರಂಪ್ ಹೇಳಿದರು.

“ನಮ್ಮ ಮಿಲಿಟರಿ ಉದ್ದೇಶಗಳನ್ನು ಸಾಧಿಸುವತ್ತ ನಾವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದ್ದೇವೆ. ಕೆಲವರು ಅವು ಬಹುತೇಕ ಪೂರ್ಣಗೊಂಡಿವೆ ಎಂದು ಹೇಳಬಹುದು. ಇರಾನ್ ನಲ್ಲಿದ್ದ ಪ್ರಮುಖ ಪಡೆಗಳು ಮತ್ತು ಸೌಲಭ್ಯಗಳನ್ನು ನಾವು ಸಂಪೂರ್ಣವಾಗಿ ನಾಶಪಡಿಸಿದ್ದೇವೆ,” ಎಂದು ಅವರು ಹೇಳಿದರು.

‘ಆಪರೇಷನ್ ಮಿಡ್ನೈಟ್ ಹ್ಯಾಮರ್’ ಕಾರ್ಯಾಚರಣೆ ಆರಂಭಿಸದಿದ್ದರೆ ಇರಾನ್ ಈಗಾಗಲೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಿತ್ತು ಎಂದು ಟ್ರಂಪ್ ಉಲ್ಲೇಖಿಸಿದರು.

“ನಾವು ನಿರೀಕ್ಷಿಸಿದ್ದ ಆರಂಭಿಕ ಕಾಲಮಿತಿಗಿಂತ ವೇಗವಾಗಿ ಮುಂದಿದ್ದೇವೆ. ಇರಾನಿನ ನಾಯಕತ್ವದ ಪ್ರಮುಖ ವ್ಯಕ್ತಿಗಳನ್ನು ಎರಡು, ಬಹುಶಃ ಮೂರು ಬಾರಿ ತೆಗೆದುಹಾಕಲಾಗಿದೆ. ಈ ಹಂತಕ್ಕೆ ಬರಲು ಒಂದು ತಿಂಗಳು ಬೇಕಾಗಬಹುದು ಎಂದು ನಾವು ಊಹಿಸಿದ್ದೆವು,” ಎಂದು ಅವರು ಹೇಳಿದರು.

ಇರಾನ್ ಆಡಳಿತವು ಕಳೆದ 47 ವರ್ಷಗಳಿಂದ ಅಮೆರಿಕನ್ನರ ಮೇಲೆ ದಾಳಿ ನಡೆಸುತ್ತಾ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಆರೋಪಿಸಿದ ಅವರು, ಪರಮಾಣು ಮಹತ್ವಾಕಾಂಕ್ಷೆಗಳನ್ನು ತ್ಯಜಿಸಲು ಅನೇಕ ಅವಕಾಶಗಳು ನೀಡಲಾಗಿದ್ದರೂ ಅದನ್ನು ಅವರು ಬಳಸಿಕೊಳ್ಳಲಿಲ್ಲ ಎಂದು ಹೇಳಿದರು.

“ನಾವು ‘ಆಪರೇಷನ್ ಮಿಡ್ನೈಟ್ ಹ್ಯಾಮರ್’ ಆರಂಭಿಸದೇ ಇದ್ದಿದ್ದರೆ ಇರಾನ್ ಈಗಾಗಲೇ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುತ್ತಿತ್ತು. ಅದನ್ನು ಬಹಳ ಹಿಂದೆಯೇ ಬಳಸುತ್ತಿತ್ತು ಮತ್ತು ಕನಿಷ್ಠ ಇಸ್ರೇಲ್ ಅನ್ನು ನಾಶಮಾಡಲಾಗುತ್ತಿತ್ತು,” ಎಂದು ಅವರು ಹೇಳಿದರು.

ಇರಾನಿನ ಡ್ರೋನ್ ಮತ್ತು ಕ್ಷಿಪಣಿ ಉತ್ಪಾದನಾ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದರು. ಇರಾನಿನ ಡ್ರೋನ್ ಸಾಮರ್ಥ್ಯ ಈಗ ಬಹಳಷ್ಟು ಕುಸಿದಿದೆ. ಡ್ರೋನ್ ಉತ್ಪಾದನಾ ವ್ಯವಸ್ಥೆಯನ್ನು ಹೊಡೆದುರುಳಿಸಲಾಗಿದೆ. ಅವರು ಡ್ರೋನ್ ತಯಾರಿಸುವ ಎಲ್ಲ ಸ್ಥಳಗಳೂ ನಮಗೆ ತಿಳಿದಿವೆ ಮತ್ತು ಅವುಗಳನ್ನು ಒಂದೊಂದಾಗಿ ಗುರಿಯಾಗಿಸುತ್ತಿದ್ದೇವೆ. ಇರಾನಿನ ಕ್ಷಿಪಣಿ ಸಾಮರ್ಥ್ಯವು ಸುಮಾರು 10 ಶೇಕಡಕ್ಕಿಂತ ಕಡಿಮೆಗೆ ಇಳಿದಿದೆ”, ಎಂದು ಟ್ರಂಪ್ ಹೇಳಿದರು.

“ಕ್ಷಿಪಣಿಗಳನ್ನು ತಯಾರಿಸುವ ಹಾಗೂ ಸಾಗಿಸುವ ಸ್ಥಳಗಳನ್ನೂ ನಾವು ಗುರಿಯಾಗಿಸುತ್ತಿದ್ದೇವೆ. ಇದುವರೆಗೆ 5,000 ಕ್ಕೂ ಹೆಚ್ಚು ನೆಲೆಗಳನ್ನು ಹೊಡೆದಿದ್ದೇವೆ. ಅವುಗಳಲ್ಲಿ ಕೆಲವು ಅತ್ಯಂತ ಪ್ರಮುಖ ಗುರಿಗಳಾಗಿವೆ. ಅಗತ್ಯವಿದ್ದರೆ ನಂತರ ಹೊಡೆಯಲು ಕೆಲವು ಪ್ರಮುಖ ಗುರಿಗಳನ್ನು ಉಳಿಸಿದ್ದೇವೆ,” ಎಂದು ಅವರು ಹೇಳಿದರು.

“ಇರಾನಿನ ನೌಕಾ ಶಕ್ತಿಗೂ ಭಾರೀ ಹಾನಿಯಾಗಿದೆ. ಇರಾನಿನ ಹೆಚ್ಚಿನ ನೌಕಾ ಶಕ್ತಿ ಈಗ ಸಮುದ್ರದ ತಳದಲ್ಲಿದೆ; ಅದು ಬಹುತೇಕ ಮುಳುಗಿಹೋಗಿದೆ,” ಎಂದು ಟ್ರಂಪ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News