ಕೊಹ್ಲಿ ಆಟ, ಜಡೇಜಾ ದಾಳಿಗೆ ಶರಣಾದ ದಕ್ಷಿಣ ಆಫ್ರಿಕಾ
Photo : x/bcci
ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ಸಂಘಟಿತ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ 243 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ವಿರಾಟ್ ಕೊಹ್ಲಿಯ ದಾಖಲೆ ಶತಕ ಹಾಗೂ ಶ್ರೇಯಸ್ ಐಯ್ಯರ್ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ತಂಡ ಈಡನ್ ಗಾರ್ಡನ್ ನಿಧಾನಗತಿ ಪಿಚ್ ನಲ್ಲಿ 326 ರನ್ ಪೇರಿಸಿತ್ತು. ಈ ಕಠಿಣ ಗುರಿ ಬೆನ್ನು ಬಿದ್ದ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾ ಜಡೇಜಾ ಸ್ಪಿನ್ ಮ್ಯಾಜಿಕ್ ಗೆ 27.1 ಓವರ್ ಗಳಲ್ಲಿ 83 ರನ್ ಗಳಿಸಿ ಆಲೌಟ್ ಆಯಿತು. ಬಲಿಷ್ಟರ ಕಾಳಗದಲ್ಲಿ ಹರಿಣಗಳನ್ನು ಸೋಲಿಸಿದ ಭಾರತ 8 ಪಂದ್ಯ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿದರೆ , ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತೀ ಕಡಿಮೆ ಮೊತ್ತ ದಾಖಲಿಸಿತು. ಈ ಹಿಂದೆ 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ 69 ರನ್ ಗೆ ಆಲೌಟ್ ಆಗಿದ್ದು ದಕ್ಷಿಣ ಆಫ್ರಿಕಾ ತಂಡದ ಅತೀ ಕಡಿಮೆ ಮೊತ್ತವಾಗಿತ್ತು.
ಭಾರತ ನೀಡಿದ 327 ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಹೀನಾಯ ಆರಂಭ ಪಡೆದುಕೊಂಡಿತು. ಟೂರ್ನಿಯಲ್ಲಿ ಬಲಿಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹರಿಣ ಬ್ಯಾಟರ್ ಗಳು ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ನಿರಂತರ ವಿಕೆಟ್ ಕಳೆದುಕೊಂಡರು. ಟೂರ್ನಿಯಲ್ಲಿ ಸತತ ಶತಕ ಬಾರಿಸಿ ಮಿಂಚಿದ್ದ ಕ್ವಿಂಟನ್ ಡಿಕಾಕ್ ಕೇವಲ 5 ರನ್ ಗೆ ಮುಹಮ್ಮದ್ ಸಿರಾಜ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹರಿಣಗಳ ವಿಕೆಟ್ ಪತನ ಆರಂಭ ವಾಯಿತು.
ನಾಯಕ ತೆಂಬ ಬವುಮ 11 ಹಾಗೂ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಹೆನ್ರಿಕ್ ಕ್ಲಾಸನ್ 1 ರನ್ ಗೆ ಜಡೇಜ ಸ್ಪಿನ್ ಮೋಡಿಗೆ ಬಲಿ ಯಾದರು. ಬಳಿಕ ಬ್ಯಾಟಿಂಗ್ ಬಂದ ವಾನ್ ಡರ್ ಡುಸ್ಸೆನ್ 13 ರನ್ ಹಾಗೂ ಆಡಂ ಮಾರ್ಕ್ರಮ್ 9 ರನ್ ಗೆ ಕ್ರಮವಾಗಿ ಮುಹಮ್ಮದ್ ಶಮಿ ಮಿಂಚಿನ ಬೌಲಿಂಗ್ ಗೆ ವಿಕೆಟ್ ಕಳೆದುಕೊಂಡರು. 13.1 ಓವರ್ ನಲ್ಲಿ ಕೇವಲ 40 ರನ್ ಗೆ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಬಹುತೇಕ ಹೀನಾಯ ಸೋಲಿನತ್ತ ಹೆಜ್ಜೆ ಹಾಕಿತು.
ಬಳಿಕ ಬ್ಯಾಟಿಂಗ್ ಬಂದ ಡೇವಿಡ್ ಮಿಲ್ಲರ್ 11 ಔಟ್ ಆಗುದರೊಂದಿಗೆ ಟೂರ್ನಿಯುದ್ದಕ್ಕೂ ವೈಫಲ್ಯ ಅನುಭವಿಸಿದರು. ಹರಿಣಗಳ ಪರ ಯಾರೂ ಹೆಚ್ಚು ಹೊತ್ತು ಕ್ರೀಸ್ ಗೆ ಅಂಟಿ ನಿಲ್ಲದ ಪರಿಣಾಮ ಕೇಶವ್ ಮಹಾರಾಜ್ 7, ಮಾರ್ಕೊ ಜಾನ್ಸನ್14 , ಕಗಿಸೊ ರಬಾಡ 6 ರನ್ ಗಳಿಸಿದರೆ, ಲುಂಗಿ ಎನ್ ಗಿಡಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.
ದಕ್ಷಿಣ ಆಫ್ರಿಕಾ ಆಘಾತಕಾರಿ ಬ್ಯಾಟಿಂಗ್ ಕುಸಿತದಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜ 5 ವಿಕೆಟ್ ಪಡೆದು ಮಿಂಚಿದರೆ ಮುಹಮ್ಮದ್ ಶಮಿ ಹಾಗೂ ಕುಲ್ ದೀಪ್ 2 ವಿಕೆಟ್ ಸಿರಾಜ್ ಒಂದು ವಿಕೆಟ್ ಕಬಳಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಇತ್ತ ಬ್ಯಾಟಿಂಗ್ ಅರಂಭಿಸಿದ ಭಾರತದ ಓಪನರ್ ಗಳು ತಂಡಕ್ಕೆ ಭರ್ಜರಿ ಆರಂಭ ನೀಡುವ ಪ್ರಯತ್ನ ಮಾಡಿದರು. ಸ್ಪೋಟಕವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 24 ಬಾಲ್ ಗಳಲ್ಲಿ 40 ರನ್ ಬಾರಿಸಿ ದಕ್ಷಿಣ ಆಫ್ರಿಕಾನ್ನು ಒತ್ತಡಕ್ಕೆ ಸಿಲುಕಿಸಿದರು. 5.5 ಓವರ್ ನಲ್ಲಿ ತಂಡ 62 ರನ್ ಗಳಿಸಿದ್ದಾಗ ಬ್ಯಾಟಿಂಗ್ ನಲ್ಲಿ ಎಡವಿದ ರೋಹಿತ್ ,ರಬಾಡ ಬೌಲಿಂಗ್ ನಲ್ಲಿ ಬವುಮಗೆ ಕ್ಯಾಚಿತ್ತು ಔಟ್ ಆದರು. ಅವರ ಬೆನ್ನಗೇ ವಿಕೆಟ್ ಒಪ್ಪಿಸಿದ ಶುಬ್ ಮನ್ ಗಿಲ್ 23 ರನ್ ಬಾರಿಸಿದರು. ಬಳಿಕ ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಜೋಡಿ ಭರ್ಜರಿ ಜೊತೆಯಾಟ ನಿರ್ವಹಿಸಿದರು. ಆಕರ್ಷಕ ಆಟ ಪ್ರದರ್ಶಿಸಿದ ಐಯ್ಯರ್ 7 ಬೌಂಡರಿ 2 ಸಿಕ್ಸರ್ ಸಹಿತ 77 ರನ್ ಬಾರಿಸಿ ಲುಂಗಿ ಎನ್ಗಿಡಿ ಬೌಲಿಂಗ್ ನಲ್ಲಿ ವಿಕಟ್ ಕಳೆದುಕೊಂಡರೆ ರಕ್ಷಣಾತ್ಮಕ ಆಟ ದ ಮೂಲಕ ತಂಡದ ಮೊತ್ತ ಮುನ್ನೂರು ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ 121 ಎಸೆತಗಲ್ಲಿ10 ಬೌಂಡರಿ ಸಹಿತ 101 ರನ್ ಬಾರಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ49 ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ ಅತೀ ಹೆಚ್ಚು ಶತಕದ ದಾಖಲೆ ಮುರಿದರು. ಭಾರತದ ಪರ ಕೊನೆಯಲ್ಲಿ ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 22 ರನ್ ಗಳಿಸಿದರೆ ರವೀಂದ್ರ ಜಡೇಜಾ 29 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಲುಂಗಿ ಎನ್ ಗಿಡಿ , ಮಾರ್ಕೊ ಜಾನ್ಸನ್ ರಬಾಡ , ಮಹಾರಾಜ್ , ಶಂಶಿ ಸೇರಿ ಯಾಲ್ಲರೂ ಒಂದು ವಿಕೆಟ್ ಪಡೆದುಕೊಂಡರು.