ಚರಂಡಿಯಿಂದ ಗ್ಯಾಸ್ ಉತ್ಪಾದನೆ ಮಾಡಲಿರುವ ಗಲ್ಗೋಟಿಯಾ....!!
‘‘ಕೋವಿಡ್ ಕಾಲದಂತೆಯೇ ಎಲ್ಪಿಜಿ ಕೊರತೆ ಬಿಕ್ಕಟ್ಟನ್ನು ಜಯಿಸುತ್ತೇವೆ’’ ಎಂದು ಪ್ರಧಾನ ಮಂತ್ರಿ ಮೋದಿಯವರು ಘೋಷಣೆ ಮಾಡಿರುವುದನ್ನು ಕೇಳಿ, ಎಲ್ಪಿಜಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಪತ್ರಕರ್ತ ಎಂಜಲು ಕಾಸಿ ಬಿಸಿಲಿನ ಝಳದ ನಡುವೆಯೂ ರೋಮಾಂಚನಗೊಂಡ. ಕೋವಿಡ್ ಕಾಲದಲ್ಲಿ ಆಕ್ಸಿಜನ್ ಸಿಲಿಂಡರ್ ಹೆಸರಿನಲ್ಲಿ ರಾಜಕಾರಣಿಗಳು ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿರುವುದು, ಈ ಬಾರಿಯೂ ನಡೆಯಲಿದೆ ಎನ್ನುವ ಸೂಚನೆ ಅವನಿಗೆ ಸಿಕ್ಕಿತು. ಮೋದಿಯ ಘೋಷಣೆಯು, ಈ ಬಾರಿ ಸಿಲಿಂಡರ್ ಹೆಸರಿನಲ್ಲಿ ಜನರನ್ನು ದೋಚಲು ನಮಗೆ ಸಿಕ್ಕಿದ ಪರವಾನಿಗೆ ಎಂದು ಪುಡಿ ನಾಯಕರೆಲ್ಲರೂ ಸಂಭ್ರಮಿಸತೊಡಗಿದರು. ಪತ್ರಕರ್ತ ಕಾಸಿ ತನ್ನ ಜೋಳಿಗೆಯ ಜೊತೆಗೆ ನೇರವಾಗಿ ಅಖಿಲ ಭಾರತ ಅಂಧ ಭಕ್ತರ ಸಂಘದ ಅಧ್ಯಕ್ಷ ವಕ್ರವರ್ತಿ ಸುಳ್ಳಿನ ಬೆಲೆಯ ಸಂದರ್ಶನಕ್ಕೆ ಮುಂದಾದ.
‘‘ಸಾರ್, ನೀವು ಅಖಿಲ ಭಾರತ ಅಂಧ ಭಕ್ತರ ಸಂಘದ ಅಧ್ಯಕ್ಷರು. ಪ್ರಧಾನಿ ಮೋದಿಯವರು ಈ ಬಾರಿ ಎಲ್ಪಿಜಿ ಕೊರತೆಯನ್ನು ಹೇಗೆ ತುಂಬಲಿದ್ದಾರೆ?’’ ಕಾಸಿ ಕೇಳಿದ.
‘‘ಭಾರತ ಇಂಧನ ವಿಷಯದಲ್ಲಿ ಈಗಾಗಲೇ ಸ್ವಾವಲಂಬಿಯಾಗಿದೆ. ಎಲ್ಪಿಜಿ ಕೊರತೆಯನ್ನು ತುಂಬಲು ನಾವು ಮೋದಿಯವರ ‘ಮನ್ ಕಿ ಬಾತ್’ ಭಾಷಣದಲ್ಲಿರುವ ಎನರ್ಜಿಯನ್ನು ಬಳಸಲು ಮುಂದಾಗಿದ್ದೇವೆ. ಪ್ರಧಾನಿ ಮೋದಿಯವರು ವಾರಕ್ಕೊಮ್ಮೆ ನೀಡುವ ‘ಮನ್ ಕಿ ಬಾತ್’ ಭಾಷಣವನ್ನು ಈ ಯುದ್ಧ ಕಾಲದಲ್ಲಿ ವಾರಕ್ಕೆ ಮೂರು ಬಾರಿ ನೀಡಲಿದ್ದಾರೆ. ಅವರ ಭಾಷಣದಿಂದ ಉತ್ಪಾದನೆಯಾಗುವ ಪಾಸಿಟಿವ್ ಎನರ್ಜಿಯನ್ನು ನಾವು ಎಲ್ಪಿಜಿ ಇಂಧನವಾಗಿ ಕನ್ವರ್ಟ್ ಮಾಡಿ ಅದನ್ನು ದೇಶಾದ್ಯಂತ ಹಂಚಲಿದ್ದೇವೆ. ಅಷ್ಟೇ ಅಲ್ಲ, ಉಳಿದ ಎಲ್ಪಿಜಿ ಇಂಧನವನ್ನು ನಾವು ವಿದೇಶಗಳಿಗೆ ರಫ್ತು ಮಾಡಲಿದ್ದೇವೆ. ಇಡೀ ವಿಶ್ವ ಯುದ್ಧದಿಂದ ಕಂಗೆಟ್ಟಿದ್ದರೆ ಭಾರತ ಮಾತ್ರ ಇಂಧನವನ್ನು ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಇದು ಕಣ್ರೀ ಮೋದಿ ಭಾರತ...’’ ಎಂದು ವಕ್ರವರ್ತಿ ಸುಳ್ಳಿನ ಬೆಲೆಯವರು ಕೆನ್ನೆ ಉಜ್ಜಿಕೊಂಡರು.
ಕಾಸಿ ಒಂದೇ ಏಟಿಗೆ ಹತ್ತು ಸಿಲಿಂಡರ್ ಸಿಕ್ಕಿದವನಂತೆ ಸಂಭ್ರಮಿಸಿದ. ‘‘ಸಾರ್...ಚರಂಡಿಯಿಂದ ಗ್ಯಾಸ್ ಉತ್ಪಾದನೆಗೆ ಏನಾದರೂ ಕ್ರಮ ತೆಗೆದುಕೊಳ್ಳಬಹುದಲ್ಲ...’’
ವಕ್ರವರ್ತಿ ಸುಳ್ಳಿನ ಬೆಲೆ ಕಾಸಿಯನ್ನು ‘ಭಲೇ ಭಲೇ!’ ಎಂಬಂತೆ ನೋಡಿ ಮುಂದುವರಿಸಿದರು ‘‘ಚರಂಡಿಯಿಂದ ಗ್ಯಾಸ್ ಉತ್ಪಾದನೆ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ನಮ್ಮ ಗಲ್ಗೋಟಿಯಾ ವಿಶ್ವವಿದ್ಯಾನಿಲಯಕ್ಕೆ ವಹಿಸಿದ್ದು ಅದಕ್ಕಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಭಾರತ ದೇಶಗಳು ಚರಂಡಿಗಳ ತವರೂರು. ಈಗಾಗಲೇ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ದಿನಗಳಿಂದ ಗಂಗಾ, ಯಮುನಾ ಮೊದಲಾದ ನದಿಗಳನ್ನು ಚರಂಡಿಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಯಶಸ್ವಿಯಾಗಿ ಸಾಗಿದೆ. ಈ ಚರಂಡಿಗಳಿಂದ ಗ್ಯಾಸ್ ಉತ್ಪಾದನೆ ಮಾಡಲು ಗಲ್ಗೋಟಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಪ್ರಯತ್ನಿಸುತ್ತಾ ಇದ್ದಾರೆ. ಕರ್ನಾಟಕದಲ್ಲಿ ಈಶ್ವರಪ್ಪ, ಸಿ. ಟಿ. ರವಿ, ಪ್ರಮೋದ್ ಮುತಾಲಿಕ್ ಹೀಗೆ ಹತ್ತು ಹಲವು ಚರಂಡಿಗಳನ್ನು ರಾಜ್ಯ ಕಾಂಗ್ರೆಸ್ ಸರಕಾರ ಸದ್ ಬಳಕೆ ಮಾಡುತ್ತಿಲ್ಲ. ಈ ಚರಂಡಿಗಳ ನೆಗೆಟಿವ್ ಎನರ್ಜಿಯನ್ನು ಈಗಾಗಲೇ ತನ್ನ ರಾಜಕೀಯಕ್ಕೆ ಬಿಜೆಪಿ ಯಶಸ್ವಿಯಾಗಿ ಬಳಸುತ್ತಿದೆ. ಪ್ರಧಾನಿ ಮೋದಿಯವರ ಸಲಹೆ ಸೂಚನೆಗಳನ್ನು ಪಾಲಿಸಿದರೆ ಈ ಚರಂಡಿಯ ಭಾಷಣಗಳಲ್ಲಿರುವ ನೆಗೆಟಿವ್ ಎನರ್ಜಿಯನ್ನು ಸಂಸ್ಕರಿಸಿ ಅದನ್ನು ಪಾಸಿಟಿವ್ ಎನರ್ಜಿಯಾಗಿ ಪರಿವರ್ತಿಸಿ ಬಳಿಕ ಸಿಲಿಂಡರ್ನಲ್ಲಿ ತುಂಬಿ ಮನೆಮನೆಗೆ ಹಂಚಬಹುದಾಗಿದೆ. ಎನರ್ಜಿ ಉತ್ಪಾದನೆಯಲ್ಲಿ ಕೇಂದ್ರ ಸರಕಾರಕ್ಕಿರುವ ಉತ್ಸಾಹ ರಾಜ್ಯ ಸರಕಾರಕ್ಕಿಲ್ಲ. ರಾಜ್ಯದಲ್ಲಿ ಸಿಲಿಂಡರ್ ಕೊರತೆಗೆ ಸಿದ್ದರಾಮಯ್ಯ ಅವರ ಸರಕಾರವೇ ಕಾರಣ. ಗಲ್ಗೋಟಿಯಾದಂತಹ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಇದ್ದಿದ್ದರೆ ಇಂದು ರಾಜ್ಯಕ್ಕೆ ಸಿಲಿಂಡರ್ ಕೊರತೆಯ ಸಮಸ್ಯೆಯೇ ಎದುರಾಗುತ್ತಿರಲಿಲ್ಲ’’ ವಕ್ರವರ್ತಿ ವಿಷಾದದ ಮುಖಭಾವದಲ್ಲಿ ನುಡಿದರು.
ಕಾಸಿಯು ದುಖಿಃತನಾದ. ಕರ್ನಾಟಕದಲ್ಲಿ ಯಥೇಚ್ಛವಾಗಿ ಹರಿಯುತ್ತಿರುವ ರಾಜಕೀಯ ಚರಂಡಿಗಳ ಸದ್ ಉಪಯೋಗವಾಗುತ್ತಿಲ್ಲವಲ್ಲ ಎಂದು ಅವನು ಖೇದಗೊಂಡ. ‘‘ ಸಾರ್, ಮೋದಿಯವರು ಕೋವಿಡ್ ಕಾಲದಂತೆಯೇ ಎಲ್ಪಿಜಿ ಕೊರತೆ ಬಿಕ್ಕಟ್ಟನ್ನು ಜಯಿಸುತ್ತೇವೆ ಎಂದಿದ್ದಾರೆ. ಇದನ್ನು ಸ್ವಲ್ಪ ವಿವರಿಸುತ್ತೀರಾ?’’
‘‘ಕೋವಿಡ್ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಸಂಪಾದನೆಯನ್ನು ಹೆಚ್ಚಿಸಿದವು. ಕೋವಿಡ್ ಕಾಲವನ್ನು ಯಶಸ್ವಿಯಾಗಿ ಬಳಸಿ ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಶ್ರೀಮಂತವಾಗಿರುವುದರಿಂದ ಇಂದು ವಿಶ್ವದ ಶ್ರೀಮಂತ ಉದ್ಯಮಿಗಳು ಭಾರತಕ್ಕೆ ಬರುವ ಧೈರ್ಯವನ್ನು ತೋರಿಸಿದ್ದಾರೆ. ಕೊರೋನ ವೈರಸನ್ನು ಯಾವುದೇ ಬಂಡವಾಳವಿಲ್ಲದೆ ತಟ್ಟೆ, ಗಂಟೆ ಬಾರಿಸಿ ಓಡಿಸಿದ ದೇಶ ನಮ್ಮದು. ಈ ಬಾರಿ ಸಿಲಿಂಡರ್ ಬಿಕ್ಕಟ್ಟನ್ನು ಬೇಯಿಸದೇ ಆಹಾರವನ್ನು ತಿನ್ನುವ ಮೂಲಕ ನಾವು ಜಯಿಸಲಿದ್ದೇವೆ. ಬೇಯಿಸಿದ ಆಹಾರದ ಬದಲಿಗೆ ಒಣಗಿಸಿದ ಸೆಗಣಿ ಬಿಸ್ಕೆಟ್ನ್ನು ಈ ಬಾರಿ ರೇಷನ್ ಅಂಗಡಿಗಳಲ್ಲಿ ಹಂಚಲಿದ್ದೇವೆ. ಬಿಪಿಎಲ್ ಕಾರ್ಡ್ದಾರರಿಗೆ ಕೇಂದ್ರ ಸರಕಾರದಿಂದ ಉಚಿತ ಸೆಗಣಿ ಬಿಸ್ಕೆಟ್ ಹಂಚಲಾಗುತ್ತದೆ. ಇದನ್ನು ಬೇಯಿಸುವ ಅಗತ್ಯವೇ ಇಲ್ಲ. ಎಪಿಎಲ್ ಕಾರ್ಡ್ದಾರರಿಗೆ ಸಬ್ಸಿಡಿಯಲ್ಲಿ ಈ ಸೆಗಣಿ ಬಿಸ್ಕೆಟ್ನ್ನು ನೀಡಲಾಗುತ್ತದೆ. ಸೆಗಣಿ ಗಂಜಲದಿಂದ ಪೌಷ್ಟಿಕ ಅಂಶಗಳನ್ನು ಗುರುತಿಸುವ ಕೆಲಸವನ್ನು ಗಲ್ಗೋಟಿಯಾ ವಿಶ್ವವಿದ್ಯಾಲಯ ಮಾಡುತ್ತಿದೆ. ಅದಕ್ಕಾಗಿ ವಿಶೇಷ ಅನುದಾನವನ್ನು ನೀಡಲಾಗಿದೆ...’’ ಸುಳ್ಳಿನ ಬೆಲೆ ಓತಪ್ರೋತವಾಗಿ ವಿವರಿಸತೊಡಗಿದರು.
‘‘ಸಾರ್, ಈ ಯುದ್ಧದಲ್ಲಿ ಭಾರತದ ಪಾತ್ರವೇನು?’’ ಕಾಸಿ ಇನ್ನೊಂದು ಪ್ರಶ್ನೆ ಮುಂದಿಟ್ಟ.
‘‘ಈ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಾರತ ಪೂರೈಸಿರುವ ಡ್ರೋನ್ಗಳನ್ನು ಬಳಸುತ್ತಿರುವುದು ವಿಶೇಷ. ನಮ್ಮದೇ ಕರ್ನಾಟಕದ ಹೆಮ್ಮೆಯ ಸುಪುತ್ರ, ನನ್ನ ಪ್ರೀತಿಯ ಶಿಷ್ಯ ಡ್ರೋನ್ ಪ್ರತಾಪ ನಿರ್ಮಿಸಿದ ಡ್ರೋನ್ಗಳನ್ನು ಭಾರತ ರಫ್ತು ಮಾಡಿವೆ. ಅಮೆರಿಕ ಭಾರತ ಒಪ್ಪಂದಲ್ಲಿ ಈ ಡ್ರೋನ್ಗಳ ಪಾತ್ರ ಮಹತ್ವಪೂರ್ಣವಾದುದು. ಇದೀಗ ಇರಾನ್ ಕೂಡ ಡ್ರೋನ್ ಪ್ರತಾಪ ತಯಾರಿಸಿದ ಇನ್ನೂರು ಡ್ರೋನ್ ಕಳುಹಿಸಿದರೆ ಭಾರತದ ಹಡಗುಗಳನ್ನು ಬಿಟ್ಟು ಬಿಡುತ್ತೇವೆ ಎಂದು ಮನವಿ ಮಾಡಿದೆ. ಈ ಬಗ್ಗೆ ಮಾತುಕತೆ ಮುಂದುವರಿದಿದೆ...’’
‘‘ಅವರು ಹಡಗುಗಳನ್ನು ಬಿಟ್ಟು ಬಿಡುವುದಾದರೆ ಅದಕ್ಕೆ ಬದಲಾಗಿ ಡ್ರೋನ್ ಪ್ರತಾಪನನ್ನೇ ಕಳುಹಿಸಿ ಕೊಡಬಹುದಲ್ಲವೆ ಸಾರ್?’’
‘‘ತಮಾಷೆ ಮಾಡ್ತೀರಾ? ಡ್ರೋನ್ ಪ್ರತಾಪ ಭಾರತದ ಹೆಮ್ಮೆ ಕಣ್ರೀ...ಅವರನ್ನು ಹಾಗೆ ಕೊಡುವುದಕ್ಕೆ ಆಗುವುದಿಲ್ಲ. ಹಾಗೆಯೇ ನಮ್ಮ ಫಾದರ್ಲ್ಯಾಂಡ್ನಿಂದ ನಮ್ಮ ಪ್ರೀತಿಯ ಫಾದರ್ ಕಾಲ್ ಮಾಡಿದ್ದಾರೆ. ಅವರಿಗೆ ಮಹಾಭಾರತದ ಕಾಲದಲ್ಲಿ ಪಾಂಡವರು ಬಳಸಿದ ಆಯುಧಗಳು ಕೆಲವು ಬೇಕಾಗಿದೆಯಂತೆ. ಮಹಾಭಾರತ, ರಾಮಾಯಣ ನಡೆದಿರುವ ಉತ್ತರ ಪ್ರದೇಶದಲ್ಲಿರುವ ಬೇರೆ ಬೇರೆ ಮಸೀದಿಗಳನ್ನು ಅಗೆಯಲು ಈಗಾಗಲೇ ಯೋಜನೆ ಸಿದ್ಧಪಡಿಸಿದ್ದೇವೆ. ಪ್ರಾಚ್ಯ ಇಲಾಖೆಗೆ ಸೂಚನೆ ನೀಡಿದ್ದೇವೆ. ಹಾಗೆ ಅಗೆದಾಗ ಆಯುಧಗಳೇನಾದರೂ ಸಿಕ್ಕಿದರೆ ಅದನ್ನು ಫಾದರ್ಲ್ಯಾಂಡ್ಗೆ ರಫ್ತು ಮಾಡಿ ಮದರ್ಲ್ಯಾಂಡ್ನ ಋಣ ತೀರಿಸುತ್ತೇವೆ...’’ ಎಂದು ವಕ್ರವರ್ತಿ ನಗೆ ಬೀರಿದರು.
‘‘ಸಾರ್...ಅಮೆರಿಕದವರು ಹಾರಿಸುತ್ತಿರುವ ಕ್ಷಿಪಣಿಗಳಿಗಿಂತ ನೀವು ಹಾರಿಸುತ್ತಿರುವ ಕಾಗೆಗಳೇ ಭೀಕರವಾಗಿವೆ ಸಾರ್. ಈ ಕಾಗೆಗಳನ್ನು ನೀವು ಇರಾನ್ ಕಡೆಗೆ ಹಾರಿಸಿ ಬಿಟ್ಟರೆ ಅವರು ಒಂದೇ ದಿನದಲ್ಲಿ ಸೋಲೊಪ್ಪಿಕೊಳ್ಳುವುದು ಖಂಡಿತ’’ ಎಂದವನೇ, ‘‘ಸಾರ್...ಅಲ್ಲೆಲ್ಲೋ ಸಿಲಿಂಡರ್ ಸ್ಟಾಕ್ ಇದೆಯಂತೆ...ಈಗ ಬಂದೆ’’ ಎಂದು ಅಲ್ಲಿಂದ ಓಡ ತೊಡಗಿದ.
‘‘ಎಲ್ಪಿಜಿ ಸಿಲಿಂಡರ್.. ಎಲ್ಲಿ ಎಲ್ಲಿ... ನನಗೂ ಒಂದು ಬೇಕಿತ್ತೂರೀ...’’ ಎನ್ನುತ್ತಾ ವಕ್ರವರ್ತಿ ಸುಳ್ಳಿನ ಬೆಲೆ ಕಾಸಿಯ ಹಿಂದೆಯೇ ಓಡ ತೊಡಗಿದರು.
► ಚೇಳಯ್ಯ