ಬಂಡೀಪುರ | ಕಾಡಾನೆಯೆದುರು ಸೆಲ್ಫಿ ತೆಗೆಯಲು ಹೋಗಿ ದಾಳಿಗೊಳಗಾದ ವ್ಯಕ್ತಿಗೆ 25 ಸಾವಿರ ರೂ. ದಂಡ!
ವೈರಲ್ ವೀಡಿಯೊದಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ ಅರಣ್ಯ ಇಲಾಖೆ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ವಲಯ ವ್ಯಾಪ್ತಿಯಲ್ಲಿ ಕಳೆದ ರವಿವಾರ ಕಾಡಾನೆಯೆದುರು ಸೆಲ್ಫಿ ಫೋಟೋ ತೆಗೆದು, ವೀಡಿಯೊ ಮಾಡುತ್ತಿದ್ದ ವೇಳೆ ಆನೆ ದಾಳಿಗೆ ಒಳಗಾದ ವ್ಯಕ್ತಿಯನ್ನು ಅರಣ್ಯ ಇಲಾಖೆ ಪತ್ತೆಹಚ್ಚಿ ದಂಡ ವಿಧಿಸಿದೆ.
ನಂಜನಗೂಡಿನ ನಿವಾಸಿ ಆರ್. ಬಸವರಾಜು ಕಾಡಾನೆಯ ದಾಳಿಗೊಳಗಾಗಿ ಅದೃಷ್ಟವಶಾತ್ ಪಾರಾದ ವ್ಯಕ್ತಿ. ಈತನ್ನು ಸೋಮವಾರ ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಮಾಹಿತಿ ಕೊರತೆಯಿಂದ ಉದ್ಧಟತನದ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆಯಿಸಿ, 25 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಆ.10ರಂದು ಸಂಜೆ ಸುಮಾರು 6:15ರ ಸುಮಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 181ರಲ್ಲಿ ಕಾಡಾನೆ ರಸ್ತೆ ದಾಟುತ್ತಿದ್ದ ವೇಳೆ ತರಕಾರಿ ಸಾಗಾಟದ ಲಾರಿಯಿಂದ ಒಂದು ಕ್ಯಾರೆಟ್ ಮೂಟೆಯನ್ನು ಕಿತ್ತು ತಿನ್ನಲಾರಂಭಿಸಿದೆ. ಇದೇವೇಳೆ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ತನ್ನ ಕಾರಿನಿಂದ ಕೆಳಗಿಳಿದು ಅರಣ್ಯ ಪ್ರದೇಶದೊಳಗೆ ಪ್ರವೇಶಿಸಿ ಆನೆಯ ಮುಂಭಾಗದಿಂದ ಸೆಲ್ಫಿ ಪೋಟೋ ತೆಗೆದಿದ್ದಾನೆ. ಬಳಿಕ ಆನೆಯ ವಿಡಿಯೋ ಮಾಡುತ್ತಿದ್ದ. ಅಷ್ಟರಲ್ಲಿ ಏಕಾಏಕಿ ಸಿಟ್ಟಿಗೆದ್ದ ಆನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಓಡುವ ಭರದಲ್ಲಿ ಆ ವ್ಯಕ್ತಿ ಎಡವಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಕಾಡಾನೆ ಆತನನ್ನು ತುಳಿಯಲು ಯತ್ನಿಸಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದನು. ಆನೆ ದಾಳಿಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆನೆಯ ಎದುರು ಉದ್ಧಟತನ ತೋರಿದ ಪ್ರಸಂಗವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ಆ ವ್ಯಕ್ತಿಯ ಪತ್ತೆ ಕಾರ್ಯ ಆರಂಭಿಸಿದೆ. ಸೋಮವಾರ ಆತ ನಂಜನಗೂಡು ನಿವಾಸಿ ಆರ್. ಬಸವರಾಜು ಎಂಬುದನ್ನು ಪತ್ತೆಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬಸವರಾಜುವಿನ ಮನೆಗೆ ತೆರಳಿ ಅವರನ್ನು ಬಂಡೀಪುರ ವಲಯ ಕಚೇರಿಗೆ ಕರೆತಂದು ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ತಿಳುವಳಿಕೆಯ ಕೊರತೆಯಿಂದ ಈ ಕೃತ್ಯ ಎಸಗಿರುವುದಾಗಿ ಬಸವರಾಜು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರೂ. 25,000 ರೂ. ದಂಡ ವಿಧಿಸಿ ತಪ್ರೊಪ್ಪಿಗೆ ಪತ್ರ ಬರೆಯಿಸಿಕೊಳ್ಳಲಾಗಿದೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.