Chamarajanagar | ನಂಜೇದೇವನಪುರ ಬಳಿ 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ
ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ ತಾಯಿ ಹುಲಿ ಸೇರಿದಂತೆ ಐದು ಹುಲಿಗಳಲ್ಲಿ ಈಗಾಗಲೇ ಮೂರು ಹುಲಿಗಳನ್ನು ಸೆರೆ ಹಿಡಿಯಲಾಗಿದ್ದು, ಮಂಗಳವಾರ ಮತ್ತೊಂದು 10 ತಿಂಗಳ ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ.
ಚಾಮರಾಜನಗರದ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಒಂದು ತಾಯಿ ಹುಲಿ ಹಾಗೂ 4 ಹುಲಿ ಮರಿಗಳನ್ನು ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿಯನ್ನು ನೀಡಿದ್ದರು.
ಅದರಂತೆ, ಜನವರಿ 9 ರಂದು ಒಂದು ತಾಯಿ ಹುಲಿಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯಲಾಗಿದ್ದು, 4 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು. ಜನವರಿ 15 ರ ರಾತ್ರಿ ಸದರಿ 4 ಹುಲಿ ಮರಿಗಳ ಪೈಕಿ ಅಂದಾಜು 10 ತಿಂಗಳ ಒಂದು ಹೆಣ್ಣು ಹುಲಿ ಮರಿಯನ್ನು ಜನವರಿ 17 ರ ರಾತ್ರಿ 10 ತಿಂಗಳ ಗಂಡು ಹುಲಿ ಮರಿಯನ್ನು ಸೆರೆಹಿಡಿಯಲಾಗಿತ್ತು ಉಳಿಕೆ 2 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು.
ಮಂಗಳವಾರ ಉಳಿಕೆ 2 ಹುಲಿ ಮರಿಗಳ ಪೈಕಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆಹಿಡಿಯಲಾಗಿದ್ದು ಹುಲಿಯನ್ನು ಸುರಕ್ಷಿತವಾಗಿ ಇಡಲಾಗಿದೆ ಮತ್ತು ಅದರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಇನ್ನು 1 ಹುಲಿ ಮರಿ ಸೆರೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಇಲಾಖೆಯ ಪಶುವೈದ್ಯಾಧಿಕಾರಿಗಳು, ದುಬಾರೆ ಕ್ಯಾಂಪಿನ 4 ಸಾಕಾನೆ, ಇಲಾಖೆಯ ತಂಡಗಳು ಮತ್ತು ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.