ಚಿಕ್ಕಮಗಳೂರು | ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್‍ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಶಿಕ್ಷಕ ಮೃತ್ಯು
ಚಿಕ್ಕಮಗಳೂರು : ಪತ್ನಿಯೊಂದಿಗೆ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣ ವೀಕ್ಷಣೆಗೆ ಹೋಗಿದ್ದ ವೇಳೆ ವೀವ್ ಪಾಯಿಂಟ್‍ನಲ್ಲಿ ಸೆಲ್ಫಿ ತೆಗೆಯಲು ಹೋಗಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದು ಪತಿ ಸಾವನ್ನಪ್ಪಿರುವ ಘಟನೆ ರವಿವಾರ ವರದಿಯಾಗಿದೆ.
ಮೃತರನ್ನು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿರಸಿಯವರಾದ ಸಂತೋಷ್(40) ಎಂದು ಗುರುತಿಸಲಾಗಿದೆ. ಸಂತೋಷ್, ತರೀಕೆರೆ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ದಸರಾ ರಜೆ ಹಿನ್ನೆಲೆಯಲ್ಲಿ ರವಿವಾರ ಪತ್ನಿ ಶ್ವೇತಾ ಅವರೊಂದಿಗೆ ಕೆಮ್ಮಣ್ಣುಗುಂಡಿ ಪ್ರವಾಸ ತಾಣಕ್ಕೆ ಪಿಕ್‍ನಿಕ್ ಬಂದಿದ್ದರು. ಕೆಮ್ಮಣ್ಣುಗುಂಡಿ ಪ್ರಾಕೃತಿಕ ಸೌಂದರ್ಯ ಸವಿಯುತ್ತಿದ್ದ ವೇಳೆ ಅಲ್ಲಿನ ವೀವ್ ಪಾಯಿಂಟ್ ಬಳಿ ಸಂತೋಷ್ ಸೆಲ್ಫಿ ತೆಗೆಯಲು ಮೊಬೈಲ್ ಹಿಡಿದು ಪೊಟೊಗೆ ಪೋಸ್ ಕೊಡಲು ಮುಂದಾಗಿದ್ದಾರೆ. ಈ ವೇಳೆ ಕಾಲು ಜಾರಿ ನೂರಾರು ಅಡಿ ಇರುವ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಸಾವಿನ ಸುದ್ದಿಯಿಂದಾಗಿ ಪತ್ನಿ ನಿತ್ರಾಣಗೊಂಡಿದ್ದಾರೆ. ಘಟನೆ ಸಂಬಂಧ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ಹಗ್ಗದ ಸಹಾಯದಿಂದ ಮೃತದೇಹವನ್ನು ಮೇಲೆತ್ತಿದ್ದಾರೆ.