ಚಿಕ್ಕಮಗಳೂರು: ಕೊಟ್ಟ ಮಾತಿನಂತೆ ರಾಜ್ಯದ ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯದ 2B ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಮುಂದಿನ ಒಂದು ತಿಂಗಳಲ್ಲಿ ಈ ಸಂಬಂಧ ರಾಜ್ಯ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳದಿದ್ದಲ್ಲಿ ಮುಂದಿನ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಪರ್ಯಾಯ ರಾಜಕೀಯ ವೇದಿಕೆಗಳ ಮೂಲಕ ಸಮುದಾಯದವರು ರಾಜಕಾರಣ ಮಾಡಲು ಜನಜಾಗೃತಿ ಮೂಡಿಸಲಾಗುವುದು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ವಕ್ತಾರ ಮುಸ್ತಾಕ್ ಹೆನ್ನಾಬೈಲ್ ಎಚ್ಚರಿಸಿದ್ದಾರೆ.

ಮಂಗಳವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ 2ಬಿ ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿದ್ದು, ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಸರಕಾರವೊಂದು ತೆಗೆದುಕೊಂಡ ಅತ್ಯಂತ ಹೇಯ ರಾಜಕೀಯ ನಿರ್ಧಾರವಾಗಿದೆ. ದೇಶದ ಇತಿಹಾಸದಲ್ಲಿ ಯಾವುದೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ಮೀಸಲಾತಿಯನ್ನು ಕಿತ್ತುಕೊಂಡು ಈ ಕ್ಷೇತ್ರಗಳಲ್ಲಿ ಮುಂದುವರಿದಿರಿರುವ ಸಮುದಾಯಕ್ಕೆ ಹಂಚಿದ ಉದಾಹರಣೆ ಇಲ್ಲ. ಇದು ದೇಶ ಕಂಡ ಅತ್ಯಂತ ಹೀನ ರಾಜಕೀಯ ಕ್ರೌರ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರ ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಯ ಕುರಿತು ಹಲವಾರು ಸರಕಾರಗಳು ನೇಮಿಸಿದ ವರದಿಗಳಲ್ಲಿ ಮುಸ್ಲಿಮರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಯು ಭಾರತದ ಉಳಿದೆಲ್ಲ ಸಮುದಾಯಗಳಿಗಿಂತ ಅತ್ಯಂತ ಕೆಳಮಟ್ಟದಲ್ಲಿದೆ ಎನ್ನುವುದನ್ನು ನಿಖರವಾಗಿ ಉಲ್ಲೇಖಿಸಲ್ಪಟ್ಟಿದೆ. 1988ರಲ್ಲಿ ಆಗಿನ ಜನತಾ ಪಕ್ಷದ ಎಸ್ ಆರ್ ಬೊಮ್ಮಾಯಿ ಸರಕಾರ ನೇಮಿಸಿದ ಜಸ್ಟಿಸ್ ಚಿನ್ನಪ್ಪ ರೆಡ್ಡಿ ನೇತೃತ್ವದ 3ನೇ ಹಿಂದುಳಿದ ಆಯೋಗವು 1990ರ ಹೊತ್ತಿಗೆ ರಾಜ್ಯದಲ್ಲಿರುವ ಸಮುದಾಯವಾರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸಲ್ಲಿಸುತ್ತು. ಈ ವರದಿಯಲ್ಲಿ ಮುಸ್ಲಿಮರ ಪರಿಸ್ಥಿತಿಯು ಕರ್ನಾಟಕದಲ್ಲಿ ಉಳಿದೆಲ್ಲ ಸಮುದಾಯಗಳಿಗಿಂತ ಕೆಳಮಟ್ಟದಲ್ಲಿರುವುದನ್ನು ಸೂಕ್ತ ಅಧ್ಯಯನ ಮತ್ತು ಅಂಕಿ ಅಂಶಗಳ ಆಧಾರದಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಈ ವರದಿಯನ್ನು ನಂತರ ಆಧಾರವಾಗಿರಿಸಿಕೊಂಡು 1995ರಲ್ಲಿ ದೇವೇಗೌಡ ನೇತೃತ್ವದ ಸರಕಾರ ಮುಸ್ಲಿಮರಿಗೆ 2ಬಿ ಅಡಿಯಲ್ಲಿ ಶೇ.4 ಮೀಸಲಾತಿಯನ್ನು ನೀಡಿತು. ಈ ಮೀಸಲಾತಿ ನ್ಯಾಯಯುತವಾಗಿರುವ ಕಾರಣ ಸರಿಸುಮಾರು 3 ದಶಕಗಳ ಕಾಲ ಇದಕ್ಕೆ ರಾಜಕೀಯ, ಸಾಮಾಜಿಕ ಧಾರ್ಮಿಕವಾದ ಯಾವುದೇ ವಲಯದಿಂದ ಸಣ್ಣ ಮಟ್ಟದಲ್ಲಿಯೂ ಕೂಡ ವಿರೋಧ ವ್ಯಕ್ತವಾಗಲಿಲ್ಲ. 2004ರಲ್ಲಿ ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ನೇಮಿಸಿದ ಜಸ್ಟಿಸ್ ರಾಜೇಂದ್ರ ಸಚ್ಚಾದ ವರದಿ ಕೂಡ ಮುಸ್ಲಿಮರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಪರಿಸ್ಥಿತಿಯು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿ ಕೂಡ ದಲಿತರಿಗಿಂತಲೂ ಕೆಳಮಟ್ಟದಲ್ಲಿದೆ ಎನ್ನುವುದನ್ನು ಪುಷ್ಟಿಕರಿಸಿದೆ ಎಂದರು.

ಮುಸ್ಲಿಮರ ಪರಿಸ್ಥಿತಿ ಇಷ್ಟು ಕೆಳಮಟ್ಟದಲ್ಲಿದ್ದರೂ 2021ರಲ್ಲಿ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರಕಾರ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗುತ್ತದೆ ಎಂದು ಭಾವಿಸಿ 2023ರಲ್ಲಿ ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡು ತಮ್ಮ ಸಮುದಾಯವಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚುವ ಅತ್ಯಂತ ಅಸಂಬದ್ದ ಹಾಗೂ ಅಘಾತಕಾರಿಯಾದ ರಾಜಕೀಯ ನಿರ್ಣಯವನ್ನು ತೆಗೆದುಕೊಂಡಿದೆ. ಅಲ್ಲದೇ ಮೀಸಲಾತಿಯನ್ನು ಅನ್ಯಾಯವಾಗಿ ರದ್ದುಗೊಳಿಸಿದ ಬೊಮ್ಮಾಯಿ ಸರಕಾರ ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗಿತ್ತು ಎಂಬ ಸುಳ್ಳನ್ನು ವ್ಯಾಪಕವಾಗಿ ಪಸರಿಸಿತು. ನಿಜಕ್ಕೂ ಮುಸ್ಲಿಮರಿಗೆ ಧರ್ಮವನ್ನು ಮಾನದಂಡವಾಗಿ ಮೀಸಲಾತಿ ನೀಡಿದ್ದಲ್ಲ, ಸಂವಿಧಾನದ ಅನುಚ್ಚೇದ 15(4) ಮತ್ತು 16(4)ರ ನಿಯಮದಂತೆ ಯಾವುದೇ ಸಮುದಾಯವು ಸಾಮಾಜಿಕ ಶೈಕ್ಷಣಿಕ ವಲಯದಲ್ಲಿ ಹಿಂದುಳಿದರೆ ಮತು ಸರಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ಹೊಂದದಿದ್ದರೆ ಅಂತಹ ಸಮುದಾಯಕ್ಕೆ ಸೌಲಭ್ಯಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬಹುದು ಎಂಬ ನೀತಿಯಂತೆ ನೀಡಲಾಗಿತ್ತು ಎಂದ ಅವರು, ಬಿಜೆಪಿ ಸರಕಾರ ರಾಜಕೀಯ ಕಾರಣಕ್ಕೆ ಮುಸ್ಲಿಮರಿಂದ ಕಿತ್ತು ತಮಗೆ ಕೊಟ್ಟ ಮೀಸಲಾತಿಯನ್ನು ಲಿಂಗಾಯತ ಸಮುದಾಯ ಮತ್ತು ಒಕ್ಕಲಿಗ ಸಮುದಾಯದ ವಿವಿಧ ಕ್ಷೇತ್ರಗಳ ನಾಯಕರು ಸರ್ಕಾರದ ಕ್ರಮ ಅಮಾನವೀಯ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದರು.

ಬೊಮ್ಮಾಯಿ ಸರಕಾರ ಮುಸ್ಲಿಮರೊಂದಿಗೆ ನಡೆದುಕೊಂಡ ನಡವಳಿಕೆಯು ಅತ್ಯಂತ ಅಪ್ರಬುದ್ಧ ಮತ್ತು ಅಸಮಂಜಸ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿದ ಒಕ್ಕಲಿಗರು ಮತ್ತು ಲಿಂಗಾಯತರು ಸೇರಿದಂತೆ, ಕನ್ನಡಿಗರು 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಸರಕಾರವನ್ನು ಹೀನಾಯವಾಗಿ ಸೋಲಿಸಿದರು. ಮುಸ್ಲಿಮರ ಪೂರ್ಣ ಬೆಂಬಲ ಮತ್ತು ಉಳಿದ ಸಮುದಾಯಗಳ ಬೆಂಬಲದೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಮುಸ್ಲಿಮರು ನಿರ್ಣಾಯಕ ಭೂಮಿಕೆ ನಿಭಾಯಿಸಿದ್ದನ್ನು ಸ್ವತ: ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದ್ದರೂ ಕೂಡ ಮುಸ್ಲಿಮರ ಕುರಿತಾದ ಬೊಮ್ಮಾಯಿ ಸರ್ಕಾರದ ದಬ್ಬಾಳಿಕೆಯ ನೀತಿಗಳನ್ನು ಬದಲಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಮುಸ್ಲಿಮರಿಗೆ ಮಾಡಿದ ಅನ್ಯಾಯವಾಗಿದೆ ಎಂದು ದೂರಿದರು.

ಮುಸ್ಲಿಂ ಸಮುದಾಯದ ವ್ಯಾಪಕ ಬೆಂಬಲದಿಂದ ಅಧಿಕಾರಕ್ಕೆ ಬಂದಿದ್ದರ ಹೊರತಾಗಿಯೂ 2ಬಿ ಮೀಸಲಾತಿ ರದ್ದತಿಯ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳದ ಕಾರಣಕ್ಕೆ ಇಡೀ ರಾಜ್ಯದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಸರಕಾರದ ವಿರುದ್ಧ ಅಸಮಾಧಾನಗೊಂಡಿದೆ. ಮುಸ್ಲಿಮರು ಅನ್ಯಾಯವಾಗಿ ಕಳೆದುಕೊಂಡ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುತ್ತೇವೆ ಎಂದು ನೀಡಿದ ಚುನಾವಣಾ ಪೂರ್ವ ಭರವಸೆಗಳ ಕುರಿತು ಪ್ರಾಮಾಣಿಕವಾಗಿ ಸ್ಪಂದಿಸದಿರುವ ಕಾರಣಕ್ಕೆ ಮುಸ್ಲಿಮರು ಕಾಂಗ್ರೆಸನ್ನು ಹೊರತುಪಡಿಸಿದ ಪರ್ಯಾಯ ಆಯ್ಕೆಗಳತ್ತ ಮುಂಬರುವ ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಚುನಾವಣೆಗಳಲ್ಲಿ ಒಲವು ತೋರುವ ಸಾಧ್ಯತೆಗಳು ನಿಚ್ಚಳವಾಗಿದೆ. ಆದ್ದರಿಂದ ಹಾಲಿ ರಾಜ್ಯ ಸರಕಾರ ಸಿಎಂ ಡಿ.ಕೆ.ಶಿವಕುಮಾರ್ ಅವರು ಹಿಂದಿನ ಬೊಮ್ಮಾಯಿ ಸರಕಾರದ ಆದೇಶವನ್ನು ರದ್ದುಗೊಳಿಸಿ ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಝಾಕಿರ್ ಹುಸೇನ್ ಉಚ್ಚಿಲ, ಗೌರವಾಧ್ಯಕ್ಷ ಡಾ.ಮುಹಮ್ಮದ್ ಶಫಿ ಮುಲ್ಲಾ, ಮುಖಂಡರಾದ ಕೋಟಾ ಇಬ್ರಾಹೀಂ ಸಾಹಿಬ್, ಅನೀಸ್ ಪಾಶ ದಾವಣಗೆರೆ, ಅಬ್ಸುಲ್ ಹಫೀಝ್, ಫರ್ವೆಝ್ ಅಹ್ಮದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor