ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಖಂಡನೀಯ : ಎಸ್‌ವೈಎಸ್
ಚಿಕ್ಕಮಗಳೂರು : ಭಾರತೀಯ ಚುನಾವಣಾ ಆಯೋಗವು ಈ ಹಿಂದೆ ಮಾದರಿಯಾಗಿ ಕಾರ್ಯನಿರ್ವಹಿಸಿದ ಕಾರಣ ಭಾರತದ ಚುನಾವಣಾ ಪ್ರಕ್ರಿಯೆಗಳು ಜಗತ್ತಿನಲ್ಲಿ ಅತ್ಯಂತ ಪ್ರಶಂಸೆ ಒಳಗಾಗಿತ್ತು. ಇಂತಹ ಸಾಂವಿಧಾನಿಕ ಸಂಸ್ಥೆಯು ಇದೀಗ ದುರುಪಯೋಗಗೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ, ಈ ಬೆಳವಣಿಗೆಯನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಖಂಡಿಸಿದೆ.
ಪ್ರಜೆಗಳ ಮತದಾನದ ಹಕ್ಕನ್ನು ಕಸಿಯುವುದು ಅವರ ಪೌರತ್ವವನ್ನು ನಿರಾಕರಿಸುವುದಕ್ಕೆ ಸಮ. ತೀವ್ರ ಪರಿಷ್ಕರಣೆಯ ಹೆಸರಲ್ಲಿ ಸಾಂಕೇತಿಕ ಕಾರಣಗಳಿಂದ ಮತದಾನದ ಹಕ್ಕು ಕಳೆದುಕೊಳ್ಳುತ್ತಿರುವ ಲಕ್ಷಾಂತರ ಜನರ ಮತ ಹಕ್ಕನ್ನು ಮರುಸ್ಥಾಪಿಸಬೇಕು ಮತ್ತು ಎಸ್‌ಐಆರ್ ಅನ್ನು ಹಿಂಪಡೆಯಬೇಕು. ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಮತ್ತು ಗೌರವವನ್ನು ರಕ್ಷಿಸುವ ಸಲುವಾಗಿ ಬಹುಜನರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕು ಎಂದು ಎಸ್‌ವೈಎಸ್ ಹೇಳಿದೆ.
ಚಿಕ್ಕಮಗಳೂರು ಉಪ್ಪಳ್ಳಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಜಂಇಯತುಲ್ ಉಲಮಾ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಸಅದಿ ಮಾಚಾರ್ ಉದ್ಘಾಟಿಸಿದರು.
ಸ್ಥಳೀಯ ಜಮಾಅತ್ ಗೌರವಾಧ್ಯಕ್ಷ ಯೂಸುಫ್ ಹಾಜಿ ಉಪ್ಪಳ್ಳಿ ಶುಭ ಹಾರೈಸಿದರು. ಸಯ್ಯಿದ್ ಹಾಮೀಂ ತಂಙಳ್, ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸಯ್ಯಿದ್ ಶಾಫಿ ನಈಮಿ ತಂಙಳ್ ಹಾಸನ, ಉಸ್ಮಾನ್ ಹಂಡುಗುಳಿ ಮತ್ತಿತರರು ಉಪಸ್ಥಿತರಿದ್ದರು. ಕೆ ಎಂ ಅಬೂಬಕರ್ ಸಿದ್ದೀಖ್ ಸ್ವಾಗತಿಸಿ ಮನ್ಸೂರ್ ಕೋಟೆಗದ್ದೆ ಧನ್ಯವಾದವಿತ್ತರು.