×
Ad

‘AMMA’ ಸಂಘಟನೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಟಿಯರಾದ ರೇವತಿ, ಪದ್ಮಪ್ರಿಯಾ

Update: 2026-07-07 17:09 IST

ರೇವತಿ ಆಶಾ  ,  ಪದ್ಮಪ್ರಿಯಾ ಜಾನಕಿರಾಮನ್ | Photo Credit : NDTV 

ರಾಜೀನಾಮೆ ನಿರ್ಧಾರವನ್ನು ಆತುರದಿಂದ ತೆಗೆದುಕೊಂಡಿಲ್ಲ, ಬದಲಾಗಿ ಸಂಘಟನೆಯೊಳಗೆ ಬದಲಾವಣೆಗೆ ಕಾದು ನಿರಾಶೆಯಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ ನಟಿಯರು.

ನಟಿಯರಾದ ರೇವತಿ ಆಶಾ ಕೇಳುನ್ನಿ ಮತ್ತು ಪದ್ಮಪ್ರಿಯಾ ಜಾನಕಿರಾಮನ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಜಂಟಿ ಹೇಳಿಕೆ ಪ್ರಕಟಿಸಿದ್ದಾರೆ. ಈ ನಿರ್ಧಾರವನ್ನು ಆತುರದಿಂದ ತೆಗೆದುಕೊಂಡಿಲ್ಲ. ಬದಲಾಗಿ ಸಂಘಟನೆಯೊಳಗೆ ಬದಲಾವಣೆ ನಿರೀಕ್ಷಿಸುತ್ತಾ ವರ್ಷಗಳ ಕಾಲ ಕಾದ ಬಳಿಕ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

Full View

ರೇವತಿ ಹಂಚಿಕೊಂಡಿರುವ ಜಂಟಿ ಹೇಳಿಕೆಯಲ್ಲಿ, “ಇದು AMMA ಸಾಹಸಗಾಥೆಯಲ್ಲಿ ಮತ್ತೊಂದು ಅಧ್ಯಾಯದಂತೆ ಕಾಣಿಸಬಹುದು. ಹಾಗಲ್ಲ. ನಮ್ಮ ರಾಜೀನಾಮೆ ದುಡುಕಿನಿಂದ ನೀಡಿಲ್ಲ ಮತ್ತು ಇದು ಪ್ರತ್ಯೇಕ ಘಟನೆಯ ಬಗ್ಗೆಯೂ ಅಲ್ಲ. ಸುಮಾರು ಒಂದು ದಶಕಗಳಿಂದ ನಮ್ಮ ಬೇಡಿಕೆ ಸರಳವಾಗಿತ್ತು. ಸುರಕ್ಷಿತವಾದ ಕೆಲಸದ ಸ್ಥಳಗಳು. ಘನತೆ, ಹೊಣೆಗಾರಿಕೆ. ಸಮಾನ ಸ್ಥಾನಮಾನ. ಪ್ರತಿ ಸದಸ್ಯರೂ ಅರ್ಹತೆ ಹೊಂದಿರುವ ಕನಿಷ್ಠ ಸೌಲಭ್ಯ. ನಮ್ಮನ್ನು ಒಂದುಗೂಡಿಸಬಹುದೆಂದು ನಾವು ನಿಜವಾಗಿಯೂ ನಂಬಿದ್ದ ಮೌಲ್ಯಗಳು. ನಮ್ಮ ಹಕ್ಕನ್ನು ಕೇಳುವ ಬೆಲೆ ಮೌನವಾಗಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದು. ಒಂದು ಕಾಲದಲ್ಲಿ ನಮಗೆ ಮನೆಯೆಂದು ಭಾಸವಾಗಿದ್ದ ಸ್ಥಳಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ದೂರ ಸಾಗುವುದು. ಹಾಗಿದ್ದರೂ ನಾವು ಸಂಘಟನೆ ಜೊತೆಗಿದ್ದೆವು. ಆದರೆ ನಿರಾಶೆಯೇ ದೊರೆತಿದೆ” ಎಂದು ಅವರು ಬರೆದಿದ್ದಾರೆ.

ಹೇಮಾ ಸಮಿತಿಯ ವರದಿಯ ನಂತರದ ಪರಿಣಾಮಗಳನ್ನು ಉಲ್ಲೇಖಿಸಿದ ನಟಿಯರು, “ಹೇಮಾ ಸಮಿತಿ ವರದಿಯ ನಂತರದ ರಾಜೀನಾಮೆಗಳು ತತ್ವಬದ್ಧ ಕ್ರಿಯೆಯಾಗಿರಲಿಲ್ಲ. ಅವರು ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದರು. ಈ ವರದಿಯ ವಿಚಾರಗಳು ತಣ್ಣಗಾದ ನಂತರ ಮತ್ತೆ ಹಳೆಯ ವ್ಯವಸ್ಥೆ ಬಂದಿದೆ. ಅಧಿಕಾರ ಹೊಸ ರೀತಿಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ. ಮುಖಗಳು ಬದಲಾಗಿವೆ. ವಿಧಾನಗಳು ಬದಲಾಗಿವೆ. ಆದರೆ ಅಸಮಾನತೆ ಸಕ್ರಿಯಗೊಳಿಸುವ ರಚನೆಗಳು ಹಾಗೆಯೇ ಉಳಿದಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“AMMA ಎನ್ನುವುದು ಎಲ್ಲಾ ನಟರ ಸಾಮೂಹಿಕ ಧ್ವನಿಯಾಗಬೇಕಿತ್ತು. ಪುರುಷವಾದಿ ಮತ್ತು ಅಧಿಕಾರ ರಾಜಕೀಯದ ಸುತ್ತ ರೂಪುಗೊಂಡಿದೆ. ಸ್ಥಾಪಕ ಆದರ್ಶಗಳನ್ನು ದುರ್ಬಲಗೊಳಿಸುತ್ತಿದೆ. ನಮಗೆ ದೂರ ಸರಿಯುವುದು ಸೋಲಲ್ಲ, ಸ್ವಾಭಿಮಾನ” ಎಂದು ಹೇಳಿರುವ ನಟಿಯರು ದೂರ ಸರಿಯುತ್ತಿದ್ದರೂ ಮಲಯಾಳಂ ಸಿನಿಮಾದ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಮುಂದಿನ ಮಹಿಳೆಯರು ತಮ್ಮಂತೆ ಹೋರಾಡುವ ಅಗತ್ಯ ಬೀಳದಿರಲಿ ಎಂದು ಆಶಿಸಿದ್ದಾರೆ.

“ಸಿನಿಮಾ ವೃತ್ತಿಯಲ್ಲಿ ಮುಂದುವರಿಯುತ್ತೇವೆ. ಉತ್ತಮ ಕತೆ ಹೇಳಲು, ಸಹೋದ್ಯೋಗಿಗಳಿಗಾಗಿ ಮತ್ತು ಹೆಚ್ಚು ಸಮಾನ ಉದ್ಯಮಕ್ಕಾಗಿ ಮುಂದುವರಿಯುತ್ತೇವೆ. ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಆಳವಾದ ಕೃತಜ್ಞತೆ ಅರ್ಪಿಸುತ್ತೇವೆ. ಸ್ಪಷ್ಟತೆ ಮತ್ತು ಭರವಸೆಯನ್ನು ಇಟ್ಟುಕೊಂಡು ಈ ಅಧ್ಯಾಯವನ್ನು ತೊರೆಯುತ್ತೇವೆ” ಎಂದು ಅವರು ಬರೆದಿದ್ದಾರೆ.

ಇದಕ್ಕೆ ಮೊದಲು ಜೂನ್ನಲ್ಲಿ AMMAದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದ ಶ್ವೇತಾ ಮೆನನ್ ಮತ್ತು 17 ಸದಸ್ಯರ ಸಂಪೂರ್ಣ ಕಾರ್ಯಕಾರಿ ಸಮಿತಿ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿತ್ತು. ಶ್ವೇತಾ AMMA ದ ಪ್ರಾಥಮಿಕ ಸದಸ್ಯತ್ವದಿಂದಲೂ ರಾಜೀನಾಮೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News