×
Ad

ʼಜನನಾಯಗನ್ʼ ಸಿನಿಮಾ ಪೈರಸಿ ಪ್ರಕರಣ: 1.2 ಕೋಟಿಗೂ ಹೆಚ್ಚು ಜನರಿಂದ ಸಿನಿಮಾ ವೀಕ್ಷಣೆ!

Update: 2026-07-03 17:03 IST

Photo Credit: The Hindu

ಸಿನಿಮಾ ಸೋರಿಕೆಯಾದ ನಂತರ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆಯಾಜ್ಞೆ ತಂದಿತ್ತು

ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾ ಪೈರಸಿ ಪ್ರಕರಣದ ಬಗ್ಗೆ ಮದ್ರಾಸ್ ಹೈಕೋರ್ಟ್ಗೆ ವಿವರ ನೀಡಿರುವ ಚೆನ್ನೈ ಪೊಲೀಸರು, “ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್ (ಸಿಬಿಎಫ್ಸಿ) ಅಧಿಕೃತವಾಗಿ ಸೆನ್ಸಾರ್ ಪ್ರಮಾಣಪತ್ರ ನೀಡುವ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾಗಿದ್ದ ಸಿನಿಮಾವನ್ನು ಸುಮಾರು 1.2 ಕೋಟಿಗೂ ಹೆಚ್ಚು ಜನ ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ 21 ಆರೋಪಿಗಳ ಪೈಕಿ ಇಬ್ಬರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ವಿವರವನ್ನು ಪೊಲೀಸರು ನ್ಯಾಯಾಲಯದ ಮುಂದೆ ನೀಡಿದ್ದಾರೆ.

ಆನ್ಲೈನ್ನಲ್ಲಿ ಸೋರಿಕೆಯಾಗಿದ್ದ ಜನನಾಯಗನ್

ಜನನಾಯಗನ್ ಸಿನಿಮಾ ಎಪ್ರಿಲ್ 9ರಂದು ಆನ್ಲೈನ್ನಲ್ಲಿ ಸೋರಿಕೆಯಾಗಿತ್ತು. ಪ್ರಕರಣದ ಮುಖ್ಯ ಆರೋಪಿ ಒಬ್ಬ ಫ್ರೀಲಾನ್ಸ್ ಫಿಲ್ಮ್ ಎಡಿಟರ್ ಆಗಿದ್ದು, ಆತ ಸಿನಿಮಾ ಎಡಿಟಿಂಗ್ ಸೂಟ್ನಿಂದ ನೇರವಾಗಿ ಹಾರ್ಡ್ಡ್ರೈವ್ ಬಳಸಿ ಚಿತ್ರದ ದೃಶ್ಯಗಳನ್ನು ಕದ್ದಿದ್ದಾನೆ. ಕದ್ದ ಚೂರುಚೂರು ವೀಡಿಯೋ ತುಣುಕುಗಳನ್ನು ಆತನ ಇಬ್ಬರು ಸಹೋದರರು ಸೇರಿ ಒಟ್ಟಿಗೆ ಜೋಡಿಸಿ ಪೂರ್ಣಪ್ರಮಾಣದ ಸಿನಿಮಾವಾಗಿ ಪರಿವರ್ತಿಸಿದ್ದಾರೆ. ನಂತರ ಗೂಗಲ್ ಡ್ರೈವ್ಗೆ ಅಪ್ಲೋಡ್ ಮಾಡಿದ್ದಾರೆ. ಅಲ್ಲಿಂದ ಈ ಲಿಂಕ್ ಪೈರಸಿ ವೆಬ್ಸೈಟ್ ಆದ ‘ತಮಿಳ್ ರಾಕರ್ಸ್’ ಕೈಸೇರಿದೆ. ಅಲ್ಲಿಂದ ಕ್ಷಣಾರ್ಧದಲ್ಲಿ ಇಡೀ ಜಗತ್ತಿಗೆ ಹರಡಿದ್ದು, ಸಿನಿಮಾ ಚಿತ್ರಮಂದಿರಕ್ಕೆ ಬರುವ ಮೊದಲೇ ಕೋಟ್ಯಂತರ ಜನ ವೀಕ್ಷಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಈ ವಿವರವನ್ನು ನ್ಯಾಯಾಲಯಕ್ಕೆ ನಿಡಿದ್ದು, ಪೈರಸಿ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಸಿನಿಮಾ ಸೋರಿಕೆಯಾದ ನಂತರ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆಯಾಜ್ಞೆ ತಂದಿತ್ತು. ಅನಧಿಕೃತ ವೆಬ್ಸೈಟ್ಗಳು ಮತ್ತು ಲಿಂಕ್ಗಳನ್ನು ಬ್ಲಾಕ್ ಮಾಡುವಂತೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಕ್ರಮ ಜರುಗಿಸುವ ಮೊದಲೇ ಸುಮಾರು 1.2 ಕೋಟಿಗೂ ಹೆಚ್ಚು ಮಂದಿ ಸಿನಿಮಾ ನೋಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೈರಸಿ ಹಿಂದಿರುವ ಹಣಕಾಸಿನ ವಹಿವಾಟು ಪತ್ತೆ ಮಾಡಲು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ವಾದಿಸಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಪ್ರಾಥಮಿಕ ದೋಷಾರೋಪ ಪಟ್ಟಿ ಮಾತ್ರ ಸಲ್ಲಿಕೆಯಾಗಿದೆ.

ಪ್ರಕರಣದ 4ನೇ ಆರೋಪಿ ಎಸ್ ರಜನಿ ಮತ್ತು 11ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಕುಮಾರಪ್ಪನ್ ಅರ್ಜಿಗಳನ್ನು ವಜಾಗೊಳಿಸಿ ಜಾಮೀನು ನಿರಾಕರಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯ ಹಂತದಲ್ಲಿರುವ ಕಾರಣ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News