ಗಾಂಧಾರಿ ಸಿನಿಮಾ | Photo Credit ; Netflix film

‘ಗಾಂಧಾರಿ’ ಸಿನಿಮಾ ತಾಯಿ ಅಪಹರಿಸಲಾದ ತನ್ನ ಮಗಳನ್ನು ಹುಡುಕಲು ಸಾಗುವ ಕತೆಯನ್ನು ಹೊಂದಿದೆ.

ತಾಪ್ಸಿ ಪನ್ನು ನಟಿಸಿರುವ ಮುಂಬರುವ ನೆಟ್ಫ್ಲಿಕ್ಸ್ ಸಿನಿಮಾ ‘ಗಾಂಧಾರಿ’ ಸಂಕಷ್ಟಕ್ಕೆ ಸಿಲುಕಿದೆ. ಲೇಖಕ ಕಲ್ಯಾಣ್ ಬಂಡಿ ಅವರು ತಮ್ಮ ಕತೆಯನ್ನು ಆಧರಿಸಿ ‘ಗಾಂಧಾರಿ’ ಸಿನಿಮಾವನ್ನು ತಯಾರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ನಿರ್ಮಾಪಕರಾದ ಕನಿಕಾ ದಿಲ್ಲೋನ್ ಅವರ ಕಥಾ ಪಿಕ್ಚರ್ಸ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಗಾಂಧಾರಿ’ ಸಿನಿಮಾದ ಕತೆ ತಮ್ಮದೇ ಮೂಲ ಪರಿಕಲ್ಪನೆ ಎಂದು ಹೇಳಿಕೊಂಡಿದ್ದಾರೆ.

ಆದರೆ ಕಲ್ಯಾಣ್ ಬಂಡಿ ವರ್ಷಗಳ ಹಿಂದೆಯೇ ಇದೇ ರೀತಿಯ ಪರಿಕಲ್ಪನೆ ಬರೆದಿರುವುದಾಗಿ ಹೇಳಿದ್ದಾರೆ. ‘ಗಾಂಧಾರಿ’ ಸಿನಿಮಾವು ಅಪಹರಿಸಲಾದ ತಮ್ಮ ಮಗಳನ್ನು ಹುಡುಕಲು ಹೊರಡುವ ತಾಯಿಯ (ತಾಪ್ಸಿ ಪನ್ನು) ಮೇಲೆ ಆಧರಿತ ಕತೆಯಾಗಿದೆ.

ಕಲ್ಯಾಣ್ ಬಂಡಿ 2019ರಲ್ಲಿ ‘ಗಾಂಧಾರಿ’ ಎನ್ನುವ ಶೀರ್ಷಿಕೆಯಡಿ ಕತೆಯನ್ನು ಬರೆದು ನೋಂದಾಯಿಸಿದ್ದಾರೆ. ಮಗಳು ಮಕ್ಕಳ ಕಳ್ಳಸಾಗಣೆ ಜಾಲದಲ್ಲಿ ಸಿಲುಕಿಕೊಂಡಾಗ ಉಗ್ರವಾಗಿಬಿಡುವ ತಾಯಿಯ ಕತೆಯನ್ನು ಅವರು ಬರೆದಿದ್ದರು. ಕಲ್ಯಾಣ್ ಬಂಡಿ ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಕೇಂದ್ರ ಜಿಎಸ್ಟಿ ಮತ್ತು ಕಸ್ಟಮ್ಸ್ನಲ್ಲಿ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಲ್ಯಾಣ್ ಬಂಡಿ 2019ರಲ್ಲಿ ಮೋನಿಕಾ ಶೆರ್ಗಿಲ್ ಅವರಿಗೆ ಕತೆಯನ್ನು ಹೇಳಿರುವುದಾಗಿ ಬಹಿರಂಗಪಡಿಸಿದ್ದಾರೆ. ಮೋನಿಕಾ ಶೆರ್ಗಿಲ್ ಆಗ ‘ವೂಟ್’ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ‘ನೆಟ್ಫ್ಲಿಕ್ಸ್’ನಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಅಂದಿನಿಂದಲೇ ‘ಗಾಂಧಾರಿ’ ಸಿನಿಮಾದ ಕತೆಯ ಮೂಲದ ಬಗ್ಗೆ ಕಲ್ಯಾಣ್ ಅವರು ಅನುಮಾನಿಸಿದ್ದಾರೆ. 2025ರ ಸೆಪ್ಟೆಂಬರ್ನಲ್ಲಿ ಕಾನೂನು ನೋಟೀಸ್ ಕಳುಹಿಸಿ ಹಣಕಾಸು ಪರಿಹಾರ ಮತ್ತು ಕ್ರೆಡಿಟ್ ನೀಡುವಂತೆ ಒತ್ತಾಯಿಸಿದ್ದಾರೆ.

ಲೇಖಕರು 2019ರಲ್ಲಿ ‘ಲಿಂಕ್ಡ್ಇನ್’ನಲ್ಲಿ ಶೆರ್ಗಿಲ್ ಅವರನ್ನು ಮೊದಲು ಸಂಪರ್ಕಿಸಿದ್ದಾಗಿಯೂ ಅದೇ ತಿಂಗಳಲ್ಲಿ ತನ್ನ ಎಂಟು ಪುಟಗಳ ಕತೆ ಮತ್ತು ‘ಗಾಂಧಾರಿ’ಯ ಎರಡು ಪುಟಗಳ ಸಾರಾಂಶವನ್ನು ಅವರಿಗೆ ಕಳುಹಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ. ಕೆಲವು ವಾರಗಳಲ್ಲಿ ಸ್ಕ್ರಿಪ್ಟ್ ಅನ್ನು ಅನುಮೋದಿಸಲಾಯಿತು. ಆದರೆ ಕತೆ ತಮ್ಮ ಕಮಿಷನಿಂಗ್ ಸ್ಲೇಟ್ಗೆ ಹೊಂದಿಕೊಳ್ಳುವುದಿಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಕಮಿಷನಿಂಗ್ ಸ್ಲೇಟ್ ಎಂದರೆ ಕಂಪನಿಯು ಪ್ರಸ್ತುತ ಹಣಕಾಸು ಒದಗಿಸಲು, ನಿರ್ಮಿಸಲು ಅಥವಾ ಅಭಿವೃದ್ಧಿಪಡಿಸಲು ನೋಡುತ್ತಿರುವ ಯೋಜನೆಗಳು ಅಥವಾ ಕಥೆಗಳ ಪ್ರಕಾರ ಪಟ್ಟಿ. ಒಂದು ಕತೆ ಹೊಂದಿಕೆಯಾಗುವುದಿಲ್ಲ ಎಂದರೆ ಆ ರೀತಿಯ ವಿಷಯಗಳನ್ನು ಆ ಸಮಯದಲ್ಲಿ ನಿರೀಕ್ಷಿಸುತ್ತಿಲ್ಲ ಎಂದು ಅರ್ಥೈಸಿಕೊಳ್ಳಬಹುದಾಗಿದೆ.

‘ನೆಟ್ಫ್ಲಿಕ್ಸ್’ನಿಂದ ಒಪ್ಪಿಗೆ ಸಿಗದ ಮೇಲೆ ಕಲ್ಯಾಣ್ ಬಂಡಿ ತಮ್ಮ ಕತೆಯನ್ನು ಚಿತ್ರಕತೆಗಾರರ ಸಂಘದಲ್ಲಿ ನೋಂದಾಯಿಸಿದ್ದಾರೆ ಮತ್ತು ಕಲ್ಪನೆಯ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. 2023ರಲ್ಲಿ ಅವರು ಬವೇಜಾ ಸ್ಟುಡಿಯೋಸ್ ಸಂಪರ್ಕಿಸಿದರು. ಮಾತ್ರವಲ್ಲದೆ, ಅವರು ತಮ್ಮ ಕತೆಯನ್ನು ‘ಜಿಯೋಹಾಟ್ಸ್ಟಾರ್’ಗೆ ಕಳುಹಿಸಿದರು. ಆದರೆ 2025ರಲ್ಲಿ ನೆಟ್ಫ್ಲಿಕ್ಸ್ ‘ಗಾಂಧಾರಿ’ ಸಿನಿಮಾ ಮಾಡುವುದಾಗಿ ಘೋಷಿಸಿದಾಗ ಕಲ್ಯಾಣ್ ಅವರಿಗೆ ಆಘಾತವಾಗಿತ್ತು. ಹೆಸರು ಕೇಳಿದ ತಕ್ಷಣ ತಮ್ಮ ಕತೆಯೆಂದು ಗಮನಕ್ಕೆ ಬಂದರೂ ಅವರು ಪ್ರಾಜೆಕ್ಟ್ ವಿವರಗಳನ್ನು ಕೇಳಿ ತಿಳಿದುಕೊಂಡು ಹೋಲಿಕೆ ಗಮನಿಸಿದ ನಂತರ ಸಮಸ್ಯೆ ಎತ್ತಿದರು.

ಅಲ್ಲದೆ, ‘ಗಾಂಧಾರಿ’ ಸಿನಿಮಾದ ಘೋಷಣೆಯ ನಂತರ ತಾವು ಸಂಪರ್ಕಿಸಿದ್ದ ಇತರ ಪ್ರೊಡಕ್ಷನ್ ಹೌಸ್ಗಳೂ ಹಿಂದೆ ಸರಿದಿವೆ. “ಶೀರ್ಷಿಕೆ ಮತ್ತು ಕಲ್ಪನೆ ನನ್ನ ಸೃಜನಶೀಲತೆ. ಅದನ್ನು ಕನಿಕಾ ಧಿಲ್ಲೋನ್ ಕತೆ ಎಂದು ಹೇಳುವುದು ಹೇಗೆ” ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಇದೀಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. “ನನಗೆ ಹಣದ ಅಗತ್ಯವಿಲ್ಲ. ಆದರೆ ಕತೆ ನನ್ನದು ಎಂದು ಒಪ್ಪಿಕೊಳ್ಳಬೇಕು. ಅಷ್ಟಕ್ಕೆ ನಾನು ಸಂತೋಷಪಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಆದರೆ ಕಥಾ ಪಿಕ್ಚರ್ಸ್ ಕಲ್ಯಾಣ್ ಬಂಡಿ ಅವರ ವಾದವನ್ನು ನಿರಾಕರಿಸಿದೆ. “ನಮ್ಮ ಕತೆ ಮತ್ತೊಬ್ಬ ವ್ಯಕ್ತಿಯ ಕಲ್ಪನೆ ಮತ್ತು ಶೀರ್ಷಿಕೆಯನ್ನೂ ನಕಲು ಮಾಡಲಾಗಿದೆ ಎನ್ನುವ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ. ಆದರೆ ಈ ಆರೋಪಗಳು ಸುಳ್ಳು ಮತ್ತು ನಾವು ಅದನ್ನು ಸಂಪೂರ್ಣವಾಗಿ ನಿರಾಕರಿಸುತ್ತೇವೆ” ಎಂದು ಕಥಾ ಪಿಕ್ಚರ್ಸ್ ಹೇಳಿದೆ.

“ಗಾಂಧಾರಿ ಸಿನಿಮಾದ ಕತೆಯನ್ನು ಕನಿಕಾ ದಿಲ್ಲೋನ್ ಅವರು ಅಭಿವೃದ್ಧಿಪಡಿಸಿದ್ದಾರೆ ಮತ್ತು ಬರೆದು ನಿರ್ಮಿಸುತ್ತಿದ್ದಾರೆ. ಈ ಕತೆ ಮತ್ತು ಕಥಾನಿರೂಪಣೆ ಸಂಪೂರ್ಣ ಕನಿಕಾ ಅವರ ಕೆಲಸವಾಗಿದೆ. ಮಾಧ್ಯಮ, ಡಿಜಿಟಲ್ ವೇದಿಕೆಗಳು ಮತ್ತು ಸಾರ್ವಜನಿಕರು ಪರಿಶೀಲಿಸದೆ ಆರೋಪಗಳನ್ನು ಹೊರಿಸಬಾರದು” ಎಂದು ಕಥಾ ಪಿಕ್ಚರ್ಸ್ ವಿನಂತಿಸಿದೆ.

‘ಗಾಂಧಾರಿ’ ಸಿನಿಮಾವನ್ನು ದೇವಶಿಶ್ ಮಖೀಜಾ ನಿರ್ದೇಶಿಸಿದ್ದಾರೆ. ಕನಿಕಾ ದಿಲ್ಲೋನ್ ಬರೆದು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಶ್ವಾಕ್ ಸಿಂಗ್ ಅವರೂ ತಾರಾಗಣದಲ್ಲಿದ್ದಾರೆ. ಸೆಪ್ಟೆಂಬರ್ 3ರಂದು ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor