‘ಜನನಾಯಗನ್’ ಸೋರಿಕೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ
Photo Credit : bookmyshow.com
ಚೆನ್ನೈ: ನಟ, TVK ಮುಖ್ಯಸ್ಥ ವಿಜಯ್ ಅವರ ಚಿತ್ರ ‘ಜನನಾಯಗನ್’ ಅನ್ನು HD ಗುಣಮಟ್ಟದಲ್ಲಿ ಆನ್ ಲೈನ್ ನಲ್ಲಿ ಸೋರಿಕೆ ಮಾಡಿದ ಆರೋಪದ ಮೇಲೆ ತಮಿಳುನಾಡು ಸೈಬರ್ ಅಪರಾಧ ಘಟಕದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಸದ್ಯ ಈ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
‘ಜನನಾಯಗನ್’ ಚಿತ್ರವನ್ನು ಪರವಾನಗಿ ಇಲ್ಲದೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನೀಡಿದ ದೂರನ್ನು ಆಧರಿಸಿ ಈ ಬಂಧನ ನಡೆದಿದೆ.
ಚಿತ್ರವನ್ನು ಆನ್ ಲೈನ್ ನಲ್ಲಿ ಹರಡುವುದನ್ನು ತಪ್ಪಿಸುವ ಭಾಗವಾಗಿ ನಡೆಯುತ್ತಿರುವ ಪ್ರಯತ್ನದಲ್ಲಿ ಪೊಲೀಸರು ಪೈರಸಿ ಚಿತ್ರವನ್ನು ಪ್ರದರ್ಶಿಸುತ್ತಿದ್ದ 300 ಲಿಂಕ್ ಗಳನ್ನು ತೆಗೆದು ಹಾಕಿದ್ದಾರೆ. ಎಪ್ರಿಲ್ 9ರಂದು ನಟ ವಿಜಯ್ ರ ‘ಜನನಾಯಗನ್’ ಚಿತ್ರದ ಕೆಲವು ತುಣುಕುಗಳು ಹಾಗೂ ಇನ್ನೂ ಕೆಲವು ಪ್ರಕರಣಗಳಲ್ಲಿ ಸಂಪೂರ್ಣ ಚಿತ್ರ ಅಂತರ್ಜಾಲದಲ್ಲಿ ಸೋರಿಕೆಯಾಗಿತ್ತು. ಈ ಸಂಬಂಧ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಸೈಬರ್ ಅಪರಾಧ ಘಟಕವು ವಿಸ್ತೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ದೂರನ್ನು ಆಧರಿಸಿ ರಾಜ್ಯ ಸೈಬರ್ ಅಪರಾಧ ತನಿಖಾ ಕೇಂದ್ರದಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ, ಹಕ್ಕು ಸ್ವಾಮ್ಯ ಕಾಯ್ದೆ ಹಾಗೂ ಸಿನಿಮಾಟೋಗ್ರಾಫ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಕೊಳ್ಳಲಾಗಿದೆ.
ತನಿಖೆಯ ವಿವಿಧ ಆಯಾಮಗಳನ್ನು ಪರಿಶೀಲಿಸಲು ಸೈಬರ್ ಅಪರಾಧ ಘಟಕದೊಳಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಡಿಜಿಟಲ್ ವಿಧಿವಿಜ್ಞಾನ ವಿಶ್ಲೇಷಣೆ ನಡೆಸಿ, URL ಗಳ ಗುರುತು ಪತ್ತೆ ಹಚ್ಚುವಿಕೆ ಮತ್ತು ಉಲ್ಲಂಘನೆಯತ್ತ ಗಮನ ಹರಿಸಲಿವೆ ಹಾಗೂ ಪೈರಸಿ ಪ್ರತಿಗಳ ಅಪ್ಲೋಡ್ ಹಾಗೂ ಹಂಚುವಿಕೆಯಲ್ಲಿ ಭಾಗಿಯಾಗಿರುವವರನ್ನು ಪತ್ತೆ ಹಚ್ಚಲಿವೆ.
ಆರೋಪಿಗಳು ಕ್ಲೌಡ್ ಸ್ಟೋರೇಜ್ ವೇದಿಕೆಗಳನ್ನು ಬಳಸಿದ್ದಾರೆ ಹಾಗೂ ಪೈರಸಿ ತುಣುಕುಗಳನ್ನು ಪ್ರಸಾರ ಮಾಡಲು ಡ್ರೈವ್ ಲಿಂಕ್ ಗಳನ್ನು ಹಂಚಿದ್ದಾರೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.