×
Ad

ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ | ಮಮ್ಮೂಟ್ಟಿ ಹಾಗೂ ಶಮ್ಲಾ ಅತ್ಯುತ್ತಮ ನಟ-ನಟಿ ಪ್ರಶಸ್ತಿ

ಪ್ರಶಸ್ತಿಗಳನ್ನು ಬಾಚಿಕೊಂಡ ‘ಮಂಜುಮ್ಮೆಲ್ ಬಾಯ್ಸ್’

Update: 2025-11-03 21:59 IST

PC : thenewsminute.com

ತಿರುವನಂತಪುರಂ: ಸೋಮವಾರ 55ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಹಿರಿಯ ನಟ ಮಮ್ಮೂಟ್ಟಿ ಹಾಗೂ ನಟಿ ಶಮ್ಲಾ ಹಂಝಾ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಬ್ರಮಯುಗಂ’ ಚಿತ್ರದಲ್ಲಿನ ನಟನೆಗಾಗಿ ಮಮ್ಮೂಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೆ, ‘ಫೆಮಿನಿಚಿ ಫಾತಿಮಾ’ ಚಿತ್ರದಲ್ಲಿನ ನಟನೆಗಾಗಿ ಶಮ್ಲಾ ಹಂಝಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇನ್ನು ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರವಾದ ಚಿದಂಬರಂ ನಿರ್ದೇಶನದ ‘ಮಂಜುಮ್ಮೆಲ್ ಬಾಯ್ಸ್’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಹಣ (ಶೈಜು ಖಾಲಿದ್), ಅತ್ಯುತ್ತಮ ಧ್ವನಿ ತಂತ್ರಜ್ಞ ಮತ್ತು ಕಲಾ ನಿರ್ದೇಶಕ (ಅಜಯನ್ ಚಲಿಸ್ಸೇರಿ), ಅತ್ಯುತ್ತಮ ಚಿತ್ರ ಗೀತೆ (ವೇದನ್) ಹಾಗೂ ಬೌಗೈನ್ ವಿಲ್ಲೆ ಚಿತ್ರ ಸೇರಿದಂತೆ ಮಂಜುಮ್ಮೆಲ್ ಬಾಯ್ಸ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಸುಶಿನ್ ಶ್ಯಾಮ್ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ, ಮಂಜುಮ್ಮೆಲ್ ಬಾಯ್ಸ್ ಚಿತ್ರ ಒಟ್ಟು ಏಳು ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದು, ಪ್ರಶಸ್ತಿ ಪಟ್ಟಿಯಲ್ಲಿ ಸಿಂಹಪಾಲನ್ನು ತನ್ನದಾಗಿಸಿಕೊಂಡಿದೆ.

2024ನೇ ಸಾಲಿನ ಈ ಚಲನಚಿತ್ರ ಪ್ರಶಸ್ತಿಗಳನ್ನು ಕೇರಳ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಪ್ರಕಟಿಸಿದರು. 2024ನೇ ಸಾಲಿನ ಪ್ರಶಸ್ತಿ ಆಯ್ಕೆಗೆ ನಾಮನಿರ್ದೇಶನಗೊಂಡಿದ್ದ 128 ಚಿತ್ರಗಳ ಪೈಕಿ 38 ಚಿತ್ರಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಖ್ಯಾತ ದಕ್ಷಿಣ ಭಾರತೀಯ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಈ ಪ್ರಶಸ್ತಿ ಆಯ್ಕೆ ಸಮಿತಿಯನ್ನು ನೇಮಿಸಲಾಗಿತ್ತು.

ಉಳಿದಂತೆ ಅತ್ಯುತ್ತಮ ಪದಾರ್ಪಣೆ ನಿರ್ದೇಶಕರಾಗಿ ಫಾಸಿಲ್ ಮುಹಮ್ಮದ್ (ಫೆಮಿನಿಚಿ ಫಾತಿಮಾ) ಆಯ್ಕೆಯಾಗಿದ್ದಾರೆ. ಈ ಚಿತ್ರ ಎರಡನೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೂ ಭಾಜನವಾಗಿದೆ. ಗಿರೀಶ್ ಎ.ಡಿ. ನಿರ್ದೇಶಿಸಿದ್ದ ಹಾಗೂ ನಸ್ಲೇನ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಹಾಸ್ಯಮಯ ಪ್ರೇಮ ಚಿತ್ರ ‘ಪ್ರೇಮಲು’ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಹಿರಿಯ ನಟ ಮೋಹನ್ ಲಾಲ್ ರ ಮಹತ್ವಾಕಾಂಕ್ಷಿ ಚೊಚ್ಚಲ ನಿರ್ದೇಶನದ ‘ಬ್ಯಾರೋಝ್’ ಚಲನಚಿತ್ರದಲ್ಲಿನ ಕಂಠದಾನಕ್ಕಾಗಿ ಸಯನೋರ ಫಿಲಿಫ್ (ಪುರುಷ ಕಂಠದಾನ ಕಲಾವಿದ) ಹಾಗೂ ಭಾಸಿ ವೈಕೋಂ (ಮಹಿಳಾ ಕಂಠದಾನ ಕಲಾವಿದೆ) ಅತ್ಯುತ್ತಮ ಕಂಠದಾನ ಕಲಾವಿದರು ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News