Photo Credit : Instagram 

ಕನ್ನಡದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ನಿರ್ಮಾಣ ಸಂಸ್ಥೆ ಮತ್ತು ತೆಲುಗಿನ ಸಿತಾರ ಎಂಟರ್‌ ಟೈನ್‌ ಮೆಂಟ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಮೋಟಾರ್ ಸೈಕಲ್ ಡೈರೀಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಶಿವಾ ಚಿರಂತನಾ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಸಾಹಸಮಯ ಪ್ರಯಾಣದ ಚಿತ್ರ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.

ತೆಲುಗಿನ ಖ್ಯಾತ ನಿರ್ಮಾಪಕ ಸೂರ್ಯದೇವರ ನಾಗ ವಂಶಿ ಮತ್ತು ಪ್ರಗತಿ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಫಿಲಮ್ಸ್ ಮತ್ತು ಸಿತಾರ ಎಂಟರ್‌ ಟೈನ್‌ ಮೆಂಟ್ಸ್ ಜಂಟಿಯಾಗಿ ಚಿತ್ರವನ್ನು ಪ್ರಸ್ತುತಪಡಿಸುತ್ತಿವೆ.

“ರಿಷಬ್ ಶೆಟ್ಟಿ ಫಿಲಮ್ಸ್ ಮತ್ತು ಸಿತಾರ ಎಂಟರ್‌ ಟೈನ್‌ ಮೆಂಟ್ಸ್ ಜೊತೆಗೂಡಿ ಹೆಮ್ಮೆಯಿಂದ ಅರ್ಪಿಸುವ ‘ಮೋಟಾರ್ ಸೈಕಲ್ ಡೈರೀಸ್’ ಜೊತೆಗೆ ಹೆದ್ದಾರಿಗಿಳಿಯಲು ಸಿದ್ಧರಾಗಿ” ಎಂದು ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ನ. 29ರಂದು ರವಿವಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. “ಪ್ರತಿ ಮೈಲಿಗಲ್ಲೂ ಒಂದು ನೆನಪು, ಪ್ರತಿ ತಿರುವಲ್ಲೂ ಒಂದು ಕಥೆ” ಎಂಬ ಅಡಿಬರಹದೊಂದಿಗೆ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದ ಘೋಷಣೆಯೊಂದಿಗೆ ರಿಷಬ್ ಶೆಟ್ಟಿ, “ಕೆಲವು ಪ್ರಯಾಣಗಳು ನಿಮ್ಮ ಗುರಿಯನ್ನು ಬದಲಿಸುತ್ತವೆ, ಇನ್ನು ಕೆಲವು ನೀವು ಯಾರೆಂಬುದನ್ನೇ ಬದಲಿಸುತ್ತವೆ. ನಮ್ಮೊಂದಿಗೆ ಹೆದ್ದಾರಿಗೆ ತೆರಳಲು ಸಿದ್ಧರಾಗಿ” ಎಂಬ ಸಂದೇಶವನ್ನೂ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟನ್‌ ಮೆಂಲ್ಲಿ ಸೂರ್ಯನ ಹಿನ್ನೆಲೆಯಲ್ಲಿ ಮೋಡ ಕವಿದ ಆಕಾಶದ ಕೆಳಗೆ ತೆರೆದಿಟ್ಟಿರುವ ಪುಸ್ತಕವೊಂದು ಕಾಣಿಸುತ್ತದೆ. ಪುಸ್ತಕದ ಪುಟಗಳ ನಡುವೆ ಹಾದುಹೋಗುವ ಮಣ್ಣಿನ ರಸ್ತೆ, ಕಾಗದ ಹರಿದು ಹೊರಬಂದಂತೆ ಭಾಸವಾಗುತ್ತದೆ. ಆ ರಸ್ತೆಯಲ್ಲಿ ಹೆಲ್ಮೆಟ್ ಮತ್ತು ಕಂದು ಬಣ್ಣದ ಜಾಕೆಟ್ ಧರಿಸಿದ ಬೈಕ್ ಸವಾರನೊಬ್ಬ ಪ್ರಯಾಣಿಸುತ್ತಿರುವ ದೃಶ್ಯವಿದೆ. ಹರಿದ ಪುಟಗಳ ಕೆಳಗೆ ಹಸಿರು ಭೂಪ್ರದೇಶ ಮತ್ತು ನೀರಿನ ದೃಶ್ಯಗಳಿವೆ. ಪುಸ್ತಕದ ಪುಟಗಳಿಂದಲೇ ಒಂದು ಸಾಹಸಮಯ ಪ್ರಯಾಣ ಆರಂಭವಾಗುವಂತೆ ಪೋಸ್ಟರ್ ವಿನ್ಯಾಸಗೊಳಿಸಲಾಗಿದೆ.

‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶಿವಾ ಚಿರಂತನಾ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಇದು ಅವರ ಚೊಚ್ಚಲ ಸಿನಿಮಾ.

ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ನವೀನ್ ನೂಲಿ ಸಂಕಲನ, ಭುವನ್ ರೆಡ್ಡಿ ಛಾಯಾಗ್ರಹಣ ಮತ್ತು ಧರಣಿ ಗಂಗೆಪುತ್ರ ಕಲಾ ನಿರ್ದೇಶನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಪ್ರಗತಿ ರಿಷಬ್ ಶೆಟ್ಟಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ.

ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ತಾರಾಗಣ ಮತ್ತು ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.