ಅಲ್ಲು ಅರ್ಜುನ್, ರಾಮ್ ಚರಣ್ ಸಹಿತ ದಕ್ಷಿಣದ ನಟರು ಬಿಹಾರ, ಮಧ್ಯಪ್ರದೇಶಗಳಲ್ಲಿ ಪ್ರಚಾರ ನಡೆಸುತ್ತಿರುವುದೇಕೆ?
Photo Credit : indiatoday.in
ದಕ್ಷಿಣ ಭಾರತದ ನಟರು ಇದೀಗ ಪಾಟ್ನಾ, ಲಕ್ನೋ, ಜೈಪುರ ಮತ್ತು ಅದರಾಚೆಗೂ ಹೋಗುತ್ತಿದ್ದಾರೆ. ಪ್ರತಿ ಪ್ರವಾಸವನ್ನೂ ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಏಕೆಂದರೆ ಹಿಂದಿ ಬೆಲ್ಟ್ ಇದೀಗ ಬೋನಸ್ ಮಾರುಕಟ್ಟೆಯಾಗಿ ಉಳಿದಿಲ್ಲ. ಆಧುನಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಅದ್ದೂರಿ ಬಜೆಟ್ಗಳನ್ನು ವಾಪಾಸು ಪಡೆಯುವುದು ಸುಲಭದ ಮಾತಲ್ಲ. ಈ ನಟರು ಬಾಲಿವುಡ್ ಹಿಂದೆಂದೂ ತಲೆಕೆಡಿಸಿಕೊಳ್ಳದ ಪ್ರದೇಶಗಳಲ್ಲಿ ಕಾಣಿಸಿಕೊಂಡು ಪ್ರಚಾರಕ್ಕಾಗಿ ಕಠಿಣ ಪರಿಶ್ರಮ ಹಾಕುತ್ತಿದ್ದಾರೆ.
ದಶಕಗಳಿಂದ ಭಾರತದಲ್ಲಿ ರಾಷ್ಟ್ರವ್ಯಾಪಿ ತಾರಾಪಟ್ಟದ ಹಾದಿಗೆ ಟೋಲ್ಗೇಟ್ ಒಂದೇ ಇತ್ತು: ಅದು ಮುಂಬೈ. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ನಟನಾಗಲು ಬಯಸುವ ದಕ್ಷಿಣ ಭಾರತೀಯ ನಟರು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಬಾಲಿವುಡ್ ನಟರು ದಕ್ಷಿಣದ ಬಾಗಿಲು ತೆರೆಯಬೇಕೆಂದರೆ ಚೆನ್ನೈ ಮೂಲಕ ಸಾಗಬೇಕಿತ್ತು.
ಬಾಲಿವುಡ್ ಕೇಂದ್ರ ಸ್ಥಾನದಲ್ಲಿತ್ತು ಮತ್ತು ಉಳಿದವರು ಪರಿಧಿಯಲ್ಲಿದ್ದರು. ಮುಂದಿನ ಹಂತದಲ್ಲಿ ದಕ್ಷಿಣದ ಸಿನಿಮಾಗಳಲ್ಲಿ ಬಾಲಿವುಡ್ ನಟರನ್ನು ಹಾಕಿಕೊಳ್ಳುವುದು ನಡೆಯಿತು. ಪರಿಚಿತ ಮುಖಗಳನ್ನು ಕಂಡು ಬಾಲಿವುಡ್ ಪ್ರೇಮಿಗಳು ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಇದು ಕೆಲ ಸಮಯ ನಡೆದರೂ ಹೆಚ್ಚು ಪ್ರಭಾವಶಾಲಿಯಾದ ಬೆಳವಣಿಗೆಯಾಗಲಿಲ್ಲ.
ಈ ಎಲ್ಲಾ ಕೇಂದ್ರ ಮತ್ತು ಪರಿಧಿಯ ಚಿತ್ರಣ ಎಸ್ಎಸ್ ರಾಜಮೌಳಿ ಅವರಿಂದ ಬದಲಾಯಿತು. ಅವರು ‘ಬಾಹುಬಲಿ’ ಸಿನಿಮಾದ ಮೂಲಕ ಭಾರತದ ಚಿತ್ರೋದ್ಯಮವನ್ನೇ ಬದಲಿಸಿಬಿಟ್ಟರು. ಅತ್ಯದ್ಭುತವಾದ ಸಿನಿಮೀಯ ಶೈಲಿಯಲ್ಲಿ ಕತೆ ನಿರೂಪಣೆ ಮಾಡುವ ಮೂಲಕ ದೇಶವ್ಯಾಪಿ ಸಿನಿಮಾ ಬಿಡುಗಡೆಗೆ ಹಾದಿ ಮಾಡಿಕೊಟ್ಟರು.
ಅದಾಗಲೇ ಬಹಳಷ್ಟು ದಕ್ಷಿಣದ ಸಿನಿಮಾಗಳು ಟಿವಿಯ ಮೂಲಕ ಹಿಂದಿ ಬೆಲ್ಟ್ಗೆ ತಲುಪಿತ್ತು. ಟೆಲಿವಿಜನ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಭಾರತೀಯ ಪ್ರೇಕ್ಷಕರು ತೆಲುಗು ಸಿನಿಮಾ ಮತ್ತು ತಾರೆಯರನ್ನು ಗುರುತಿಸಲಾರಂಭಿಸಿದ್ದರು. ಹೀಗಾಗಿ ರಾಜಮೌಳಿ ಅವಕಾಶವನ್ನು ಗುರುತಿಸಿದರು ಮತ್ತು ಪ್ರಚಾರ ಮಾಡಿದರು. ಟೈಯರ್ 2 ಮತ್ತು ಟೈಯರ್ 3 ನಗರಗಳ ಸಿಂಗಲ್ ಸ್ಕ್ರೀನ್ಗಳಲ್ಲೂ ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದರು. ಬಾಲಿವುಡ್ ಮಲ್ಟಿಪ್ಲೆಕ್ಸ್ಗಳು ಮತ್ತು ನಗರದ ವೀಕ್ಷಕರ ಕಡೆಗೆ ತಿರುಗಿದ್ದ ಸಂದರ್ಭದಲ್ಲಿ ತೆಲುಗು ಸಿನಿಮಾ ಈ ಸಣ್ಣ ಪುಟ್ಟ ನಗರಗಳಲ್ಲಿ ಪ್ರಭಾವ ಬೀರಿತು.
ಬಾಹುಬಲಿ, ಆರ್ಆರ್ಆರ್ ಮೂಲಕ ಪ್ರಚಾರ ಮಾಡಿದರು. ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ರನ್ನು ಕರೆದೊಯ್ದು ಜೈಪುರ್ ಹವಾ ಮಹಲ್ ಮುಂದೆ ದೊಡ್ಡ ಕಾರ್ಯಕ್ರಮ ನಡೆಸಿದರು.
ಹಿಂದಿ ಆವೃತ್ತಿಯಲ್ಲಿ RRR ಭಾರತದಲ್ಲಿ 272 ಕೋಟಿ ರೂ.ಗಳಿಗೂ ಮೀರಿ ಆದಾಯ ಗಳಿಸಿತು. ದಕ್ಷಿಣ ಭಾರತದ ಅನೇಕ ನಟರು ಮತ್ತು ಚಲನಚಿತ್ರ ನಿರ್ಮಾಪಕರು ಈ ತಂತ್ರದ ಮಹತ್ವ ಗುರುತಿಸಿ ಅನುಸರಿಸಿದರು. ಯಶ್, ರಾಮ್ ಚರಣ್, ಅಲ್ಲು ಅರ್ಜುನ್ ಈ ನಗರಗಳಿಗೆ ಹೋಗಲಿ ಪ್ರಚಾರ ನಡೆಸಿದರು. ಕೆಜಿಎಫ್:ಚಾಪ್ಟರ್ 2 ಹಿಂದಿ ಆವೃತ್ತಿ ದಾಖಲೆ 430 ಕೋಟಿ ರೂ. ಗಳಿಸಿತು. ನಂತರ ʼಪುಷ್ಪಾ 2ʼ ಹಿಂದಿ ಆವೃತ್ತಿ 800 ಕೋಟಿ ರೂ. ಆದಾಯ ಗಳಿಸಿದೆ.
ಬಾಲಿವುಡ್ ಹೋಗದ ನಗರಗಳಿಗೆ, ಯುಟ್ಯೂಬ್, ಕಪಿಲ್ ಶೋ ಮೊದಲಾದೆಡೆ ಈ ನಟರು ಬಾರದ ಭಾಷೆಯಲ್ಲಿ ಮಾತನಾಡಿ ಜನರನ್ನು ತಲುಪಿದ್ದಾರೆ. ದಕ್ಷಿಣ ಭಾರತದ ನಟರು ಬ್ರಾಂಡ್ ಪಾಲುದಾರಿಕೆ, ಕಲಾವಿದರ ಸಹಯೋಗ ಮತ್ತು ಸಾಮಾಜಿಕ ಮಾಧ್ಯಮಗಳ ಅಭಿಯಾನಗಳನ್ನು ಮಾಡುತ್ತಾರೆ. ರೇಡಿಯೋ, ಹೊರಾಂಗಣ ಜಾಹೀರಾತಿನಲ್ಲಿ ಭಾಗವಹಿಸುತ್ತಾರೆ.
ಮುಖ್ಯವಾಗಿ ಚಲನಚಿತ್ರಗಳು ಸ್ವತಃ ಪ್ರಚಾರವಾಗಿರುತ್ತವೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಪ್ರೇಕ್ಷಕರು ಏಕ-ಪರದೆಯ ಪ್ರೇಕ್ಷಕರು, ಕುಟುಂಬ ಪ್ರೇಕ್ಷಕರು. ಚಲನಚಿತ್ರ ವಿಮರ್ಶೆಗಳನ್ನು ಓದದ ಮತ್ತು ಚಿತ್ರದ ಭಾವನೆಗಳನ್ನು ಅನುಭವಿಸಿ ನೋಡುವವರು. ಬಾಲಿವುಡ್ನಿಂದ ನಿರ್ದಿಷ್ಟ ಸಿನಿಮಾಗಳು ಕಣ್ಮರೆಯಾಗುತ್ತಿದ್ದುದನ್ನು ನೋಡಿದ್ದರು. ಅವೇ ಮಾಸ್ ಎಂಟರ್ಟೈನರ್ಗಳು. ಸರಳವಾದ ಮತ್ತು ತಮ್ಮೊಳಗಿನ ಪಾತ್ರವೆಂದು ಬಿಂಬಿಸುವ ಸಿನಿಮಾಗಳು. ಇಡೀ ಕುಟುಂಬ ಹೋಗಿ ನೋಡಬಹುದಾದ ಸಿನಿಮಾಗಳು.
ಪುಷ್ಪ- ದಿ ರೈಸ್ ಯಾರಿಗೂ ತಲೆಬಾಗದ ನಾಯಕನ ಕತೆ. ಕೆಜಿಎಫ್ ಶೂನ್ಯದಿಂದ ತನ್ನ ದಾರಿ ಕಂಡುಕೊಂಡ ವ್ಯಕ್ತಿಯ ಕತೆ. ಪೆದ್ದಿ ಸಿನಿಮಾ ಜನರಿಗಾಗಿ ಯಾವುದೇ ಮಟ್ಟಕ್ಕೆ ಹೋಗುವ ವ್ಯಕ್ತಿಯ ಕತೆ. ವಿಷಯಗಳು, ಥೀಮ್ಗಳು ಮತ್ತು ಸಾಮಾಜಿಕ ಸಂದೇಶಗಳು ಪ್ರಶ್ನಾರ್ಹವಾಗಬಹುದು. ಆದರೆ ಜನರ ಜೊತೆಗಿನ ಸಂಪರ್ಕ ನಿರಾಕರಿಸಲಾಗದು. ಅವರು ವರ್ಷಗಳಿಂದ ಸಂಪರ್ಕವಿಲ್ಲದ ಜನರೊಂದಿಗೆ ಮಾಸ್ ಪಾತ್ರಗಳ ಮೂಲಕ ಸಂವಹನ ಮಾಡಿದರು.
ಮಾಹಿತಿ ಕೃಪೆ: India Today