×
Ad

ಮಂಗಳೂರು: ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನಿಂದ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2024-02-17 18:56 IST

ಮಂಗಳೂರು, ಫೆ.17: ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ವತಿಯಿಂದ 11 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ನಗರ ಹೊರವಲಯದ ಗಂಜಿಮಠದಲ್ಲಿರುವ ಝಾರಾ ಕನ್ವೆಂಶನ್ ಸೆಂಟರ್‌ ನಲ್ಲಿ ಶನಿವಾರ ನಡೆಯಿತು.

ಬಿಡಬ್ಲ್ಯುಎಫ್ ಸಂಘಟಿಸುತ್ತಿರುವ ಎಂಟನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯೆನೆಪೊಯ ವಿವಿಯ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಬಿಡಬ್ಲ್ಯುಎಫ್ ‘ಸಮಾಜದ, ಸಮುದಾಯದ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂದು ವಿವಾಹವಾದ 11 ಜೋಡಿ ನವದಂಪತಿಗೆ ಅಲ್ಲಾಹನು ಅನುಗ್ರಹಿಸಲಿ’ ಎಂದರು.

ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದ್ದರು. ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮತ್ತು ಆಶೀರ್ವಚನ ನೀಡಿದರು.

ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ನಂಡೆ ಪೆಂಙಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್, ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದ.ಕ. ಮತ್ತು ಉಡುಪಿ ಜಿಲ್ಲಾ ಜಂ ಇಯ್ಯುತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಸಲೀಂ, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಬಿಸಿಸಿಐ ಆಡಳಿತ ಸಮಿತಿಯ ಸದಸ್ಯ ಆಸಿಫ್ ಸೂಫಿಖಾನ, ಸಮಾಜ ಸೇವಕ ಅಬ್ಬಾಸ್ ಉಚ್ಚಿಲ್, ಕೆಕೆಎಂಎ ಕರ್ನಾಟಕ ಅಧ್ಯಕ್ಷ ಎಸ್.ಎಂ. ಫಾರೂಕ್, ಬಿಡಬ್ಲುಎಫ್ ಸಂಯೋಜಕ ಮುಹಮ್ಮದ್ ರಫೀಕ್ ಕೃಷ್ಣಾಪುರ, ಕಾರ್ಯಕಾರಿ ಸಮಿತಿ ಸದಸ್ಯ ಡಾ. ನಝೀರ್ ಉಬರ್, ಸದಸ್ಯ ಮುಹಮ್ಮದ್ ಸಿದ್ದೀಕ್ ಕಾಪು ಭಾಗವಹಿಸಿದ್ದರು.

ಬ್ಯಾರೀಸ್ ವೆಲ್ಫೇರ್ ಫೋರಂನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಲ್ ವಫಾ ಜಾರಿಟೆಬಲ್ ಟ್ರಸ್ಟ್ ನ ಟ್ರಸ್ಟಿ ಕೆಎಸ್ ಅಬೂಬಕರ್ ಕಿರಾಅತ್ ಪಠಿಸಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಪ್ರಧಾನ ಸಲಹೆಗಾರ ಬಶೀರ್ ಬಜ್ಪೆ ವಂದಿಸಿದರು.

*ಸಾಧಕರಿಗೆ ಸನ್ಮಾನ: ಮಂಗಳೂರಿನ ಭಾರತ್ ಇನ್ಫ್ರಾಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ. ಮತ್ತು ಸೌದಿ ಅರೇಬಿಯಾದ ಅಲ್ ಜುಬೈಲ್‌ ನಲ್ಲಿರುವ ಅಲ್ ಮುಝೈನ್ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಝಕರಿಯಾ ಜೋಕಟ್ಟೆ ಅವರಿಗೆ ಜೀವಮಾನ ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು.

ಗೌರವಾರ್ಪಣೆ: ರಾಜ್ಯ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ ಮತ್ತು ಮೀಫ್ (ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ)ದ ಪರವಾಗಿ ಒಕ್ಕೂಟದ ಉಪಾಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ ಅವರನ್ನು ಗೌರವಿಸಲಾಯಿತು.





"ಆರ್ಥಿಕ ಸಂಕಷ್ಟದಿಂದ ವಿವಾಹ ಕಾರ್ಯಕ್ರಮಗಳನ್ನು ಉದ್ದೇಶಿತ ರೀತಿಯಲ್ಲಿ ನಡೆಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಡಬ್ಲುಎಫ್ ಮಾಡಿರುವ ಈ ಸೇವೆಯು ಶ್ಲಾಘನೀಯ".

-ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವರು, ದ.ಕ.ಜಿಲ್ಲೆ



"ಅನಿವಾಸಿ ಭಾರತೀಯರು ಕೂಡ ನಾನಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕನ್ನಡಿಗರ ಅಹವಾಲು ಆಲಿಸಿ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಅನಿವಾಸಿ ಕನ್ನಡಿಗ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅದಲ್ಲದೆ ‘ನಮ್ಮ ಊರು-ನಮ್ಮ ನಾಡು’ ಎಂಬ ವಿಶಿಷ್ಟ ಪರಿಕಲ್ಪನೆಯ ಯೋಜನೆ ರೂಪಿಸುವ ಉದ್ದೇಶವಿದೆ. ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹಾರ-ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪ್ರಪಂಚದ ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಲು ಜನವರಿ 4,5,6ರಂದು ಕರ್ನಾಟಕ ಪ್ರವಾಸಿ ದಿವಸ ಕಾರ್ಯಕ್ರಮ ಆಯೋಜಿಸಲಾಗುವುದು".

-ಡಾ. ಆರತಿ ಕೃಷ್ಣ, ಉಪಾಧ್ಯಕ್ಷೆ, ಸರಕಾರದ ಅನಿವಾಸಿ ಭಾರತೀಯ ಕೋಶ



"ಅಬುಧಾಬಿಯಲ್ಲಿ 20 ವರ್ಷದ ಹಿಂದೆ ಸ್ಥಾಪಿಸಲ್ಪಟ್ಟ ಬಿಡಬ್ಲುಎಫ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಹುಟ್ಟೂರಿನ ಮೇಲಿನ ಪ್ರೀತಿಯಿಂದ ಈ ಸೇವೆಗಳನ್ನು ಮಾಡಲು ನಮಗೆ ಸಾಧ್ಯವಾಯಿತು. ಈವತ್ತಿನ 11 ಜೋಡಿ ಸಹಿತ ಈವರೆಗೆ 121 ಜೋಡಿಗಳಿಗೆ ಮದುವೆ ಮಾಡಿಕೊಡಲಾಗಿದೆ. ಈ ಸೇವೆಯು ನಮಗೆ ತೃಪ್ತಿ ತಂದಿದೆ.

-ಮುಹಮ್ಮದ್ ಅಲಿ ಉಚ್ಚಿಲ್, ಅಧ್ಯಕ್ಷರು, ಬಿಡಬ್ಲುಎಫ್ -ಅಬುಧಾಬಿ



"ಬಿಡಬ್ಲುಎಫ್ ವತಿಯಿಂದ ಸಾಮೂಹಿಕ ವಿವಾಹವಲ್ಲದೆ ಜಾತಿ-ಮತ ಭೇದವಿಲ್ಲದೆ ಅರ್ಹರಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಸರಕಾರ ಮಂಗಳೂರು ಸುತ್ತಮುತ್ತ ಜಮೀನು ನೀಡಿದರೆ ಅಲ್ಲಿ ಬಿಡಬ್ಲುಎಫ್‌ ನಿಂದ ಕೇಂದ್ರ ಕಚೇರಿ ಸ್ಥಾಪಿಸುವ ಉದ್ದೇಶವಿದೆ".

-ಅಬ್ದುಲ್ಲ ಮಾದುಮೂಲೆ, ಪ್ರಧಾನ ಕಾರ್ಯದರ್ಶಿ, ಬಿಡಬ್ಲುಎಫ್ -ಅಬುಧಾಬಿ



"ಮುಹಮ್ಮದ್ ಅಲಿ ಉಚ್ಚಿಲ್ ನೇತೃತ್ವದ ಅಬುಧಾಬಿಯ ಬಿಡಬ್ಲುಎಫ್ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿರುವ ಬಿಡಬ್ಲುಎಫ್ ಮತ್ತಷ್ಟು ಕಾರ್ಯಕ್ರಮ ಆಯೋಜಿಸಲಿ".

- ಯೆನೆಪೊಯ ಅಬ್ದುಲ್ಲ ಕುಂಞಿ, ಕುಲಾಧಿಪತಿ, ಯೆನೆಪೊಯ ವಿಶ್ವವಿದ್ಯಾನಿಲಯ ಮಂಗಳೂರು



"ಬಿಡಬ್ಲುಎಫ್ ನೊಂದವರ ಕಣ್ಣೀರೊರೆಸುವ ಕಾರ್ಯವನ್ನು ಅತ್ಯಂತ ಯಶಶ್ವಿಯಾಗಿ ಮಾಡುತ್ತಿದೆ. ಮುಂದಿನ ಯೋಜನೆಗಳಿಗೆ ತಾನು ಎಲ್ಲಾ ರೀತಿಯ ಸಹಕಾರಗಳನ್ನು ನೀಡಲು ಬದ್ಧನಾಗಿರುವೆ.

-ಬಿ. ಝಕರಿಯಾ ಜೋಕಟ್ಟೆ, ಸಿಇಒ, ಅಲ್ ಮುಝೈನ್ ಕಾಂಟ್ರಾಕ್ಟಿಂಗ್ ಕಂಪೆನಿ


























Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News