ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಬಲಿಯಾದ ಮಹಿಳೆಗೆ ಗರಿಷ್ಠ ಪರಿಹಾರಕ್ಕೆ ಮಾಜಿ ಮೇಯರ್ ಶಶಿಧರ ಹೆಗ್ಡೆ ಆಗ್ರಹ
ಮಂಗಳೂರು, ಸೆ.10: ಕೂಳೂರಿನಲ್ಲಿ ರಸ್ತೆಯ ಹೊಂಡಕ್ಕೆ ಬಿದ್ದು ಮೃತಪಟ್ಟ ದ್ವಿಚಕ್ರ ಸವಾರೆ ಮಾಧವಿ ಕುಟಂಬಕ್ಕೆ ಕುಟುಂಬಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗರಿಷ್ಠ ಪರಿಹಾರವನ್ನು ಒದಗಿಸಬೇಕು ಎಂದು ಮಂಗಳೂರು ಮಹಾನಗರದ ಪಾಲಿಕೆಯ ಮಾಜಿ ಮೇಯರ್ ಶಶಿಧರ ಹೆಗ್ಡೆ ಆಗ್ರಹಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಸಮರ್ಥನೀಯ ಎಂದರು.
ರಾಷ್ಟ್ರೀಯ ಹೆದ್ದಾರಿಯನ್ನು ಸುಸ್ಥಿತಿಯಲ್ಲಿಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗಮನ ಹರಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಯ ಬಗ್ಗೆ ದಕ್ಷಿಣ ಕನ್ನಡದ ಸಂಸದರು ಮತ್ತು ಸ್ಥಳೀಯ ಇಬ್ಬರು ಶಾಸಕರು ಮೌನವಾಗಿದ್ದಾರೆ ಎಂದು ಆರೋಪಿಸಿದರು.
ನೇತ್ರಾವತಿ ನದಿಯಂತೆ ರಾಷ್ಟ್ರೀಯ ಹೆದ್ದಾರಿ 66 ದ.ಕ. ಜಿಲ್ಲೆಯ ಜೀವನಾಡಿಯಾಗಿದ್ದು, ಹೊಂಡಗಳಿಂದ ತುಂಬಿ ರುವ ರಾಷ್ಟ್ರೀಯ ಹೆದ್ದಾರಿಯನ್ನು ಹದಿನೈದು ದಿನಗಳ ಒಳಗಾಗಿ ದುರಸ್ಥಿಗೆ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ನಿರಂತರ ಅಪಘಾತ :
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳಿಂದಾಗಿ ನಿರಂತರ ಅಪಘಾತ ಸಂಭವಿಸುತ್ತಲೇ ಇದೆ. ಕೂಳೂರಿನಲ್ಲಿ ಮಂಗಳವಾರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮಾಧವಿ ರಸ್ತೆಯಲ್ಲಿನ ಹೊಂಡ ತಪ್ಪಿಸಲು ಹೋಗುವಾಗ ಹೊಂಡಕ್ಕೆ ಬಿದ್ದು, ಅವರ ಮೇಲೆಯೆ ಮಿನಿ ಲಾರಿಹರಿದು ಅವರು ಮೃತಪಟ್ಟಿದ್ದಾರೆ. ಸೆ.6ರಂದು ನಂತೂರು ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬಿದ್ದಿದ್ದಾರೆ. ಆದರೆ ಹಿಂದಿನ ಬರುತ್ತಿದ್ದ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಅವರು ಪಾರಾಗಿದ್ದಾರೆ. ಮೂರು ತಿಂಗಳ ಹಿಂದೆ ಪಣಂಬೂರಿನಲ್ಲಿ ಸುರತ್ಕಲ್‌ನ ಮುಹಮ್ಮದ್ ಅಶ್ರಫ್ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅವರ ದ್ವಿಚಕ್ರ ವಾಹನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಕೋಡಿಕಲ್‌ನಲ್ಲಿ ಯುವ ಇಂಜಿನಿಯರ್ ಒಬ್ಬರು ಕೆಲಸಕ್ಕೆ ಸೇರಿದ ದಿನವೇ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಮದುವೆ ಫಿಕ್ಸ್ ಆಗಿದ್ದ ಕಾಲೇಜು ಉಪನ್ಯಾಸಕಿ ರಸ್ತೆ ದುರಂತಕ್ಕೆ ಬಲಿಯಾಗಿದ್ದರು. ಹೀಗೆ ಆನೇಕ ಮಂದಿ ಹೆದ್ದಾರಿಯಲ್ಲಿರುವ ಹೊಂಡಗಳ ಕಾರಣದಿಂದಾಗಿ ಪ್ರಾಣ ಕಳೆದುಕೊಂಡಿ ದ್ದಾರೆ. ಮನೆಯಿಂದ ಈ ಹೆದ್ದಾರಿಯಲ್ಲಿಕೆಲಸಕ್ಕೆ ಹೊರಟವರು ಮನೆಗೆ ಜೀವಸಹಿತ ವಾಪಸಾಗುತ್ತಾರೆ ಎಂಬ ಗ್ಯಾರೆಂಟಿ ಇಲ್ಲ ಎಂದರು.
ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮನೆಗೆ ಹೋಗಲಿ :
ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಸಂಸದರು ಮತ್ತು ಶಾಸಕರು ಸಮಸ್ಯೆ ಬಗೆಹರಿಸಲು ಗಮನ ಹರಿಸಲಿ ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗಳಲ್ಲಿ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯಅಧಿಕಾರಿಗಳ ಉಪಸ್ಥಿತಿಯಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ರಸ್ತೆಯ ವಿನ್ಯಾಸದ ದೋಷ, ಅಸಮರ್ಪಕ ನಿರ್ವಹಣೆ , ಮೂಲಭೂತ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಹೆದ್ದಾರಿಯ ಈಗಿನ ಸಮಸ್ಯೆಗೆ ಕಾರಣ ವಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕ ರಸ್ತೆಗಳಿಗೆ ಸರಿಯಾಗಿ ಜೋಡನೆ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿದೆ. ಮನಪಾ ವ್ಯಾಪ್ತಿಯಲ್ಲಿ ಉಳ್ಳಾಲ ಸೇತುವೆಯಿಂದ ಮುಕ್ಕದ ತನಕ ಹಾದುಹೋಗುತ್ತದೆ. ಈ ಹೆದ್ದಾರಿಯ ಅವ್ಯವಸ್ಥೆಯು ಮನಪಾಕ್ಕೆ ಸಮಸ್ಯೆ ತಂದೊಡ್ಡಿದೆ. ನಂತೂರ್ ಜಂಕ್ಷನ್‌ನಲ್ಲಿ ಆನೇಕ ಅಪಘಾತಗಳು ಸಂಭವಿಸಿ ಆನೇಕ ಮಂದಿ ಸಾವನ್ನಪ್ಪಿದ್ದಾರೆ. ಕೆಪಿಟಿ ವೃತ್ತದಲ್ಲಿ ಫ್ಲೈಓವರ್ ಮಾಡಬೇಕಿತ್ತು. ಆದರೆ ಅದನ್ನು ವಾಹನ ಗಳ ಒತ್ತಡ ಇಲ್ಲದ ಕುಂಟಿಕಾನದಲ್ಲಿ ಮಾಡಲಾಗಿದೆ. ಕೋಡಿಕ್ರಾಸ್‌ನಲ್ಲಿ ಸಂಪರ್ಕ ಕಲ್ಪಿಸಿದ ಕಾರಣದಿಂದಾಗಿ ಇಲ್ಲಿ ಆನೇಕ ಅಪಘಾತ ಸಂಭವಿಸಿದ್ದು, ಆನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ಶಾಶ್ವತ ವಿಕಲಾಂಗ ರಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಮಳೆಗಾಲ ಮುಗಿಯುವ ಹೊತ್ತಿಗೆ ಮಾಡ ಬೇಕಿತ್ತು. ಆದರೆ ಮೇ ತಿಂಗಳಲ್ಲಿ ಪ್ಯಾಚ್ ವರ್ಕ್ ಮಾಡಲಾಗುತ್ತಿದೆ. ಇದು ಮಳೆಗಾಲದಲ್ಲಿ ಕೊಚ್ಚಿಹೋಗಿತ್ತು. ಬಸ್‌ಗಳ ಓಡಾಟ, ಎಂಆರ್‌ಪಿಎಲ್, ನವಮಂಗಳೂರು ಬಂದರಿಗೆ ಬರುವ ಘನವಾಹನಗಳು ಒಂದೆರಡು ಬಾರಿ ಸಂಚರಿಸಿದ ಬೆನ್ನಲ್ಲೇ ರಸ್ತೆಯ ಗುಂಡಿ ಮುಚ್ಚಿರುವುದು ಕಿತ್ತು ಹೋಗುತ್ತದೆ ಎಂದು ದೂರಿದರು.
10 ವರ್ಷಗಳಲ್ಲಿ ಸಂಗ್ರಹವಾದ ಹಣ ಎಲ್ಲಿ ? :
ರಾಷ್ಟ್ರೀಯ ಹೆದ್ದಾರಿಯ ಬಿ.ಸಿರೋಡ್ ಟೋಲ್‌ಗೇಟ್‌ನಲ್ಲಿ 15 ಕೋಟಿ ರೂ. -20 ಕೋಟಿ ರೂ ವರ್ಷಕ್ಕೆ ಸಂಗ್ರಹವಾ ಗುತ್ತದೆ. ಆದರೆ ಈ ಹಣವನ್ನು ಹೆದ್ದಾರಿಯ ದುರಸ್ತಿಗೆ ಬಳಕೆಯಾಗುತ್ತಿಲ್ಲ. 10 ವರ್ಷಗಳಲ್ಲಿ ಸಂಗ್ರಹವಾಗಿರುವ ಆ ಹಣ ಎಲ್ಲಿ ಹೋಗಿದೆ ಎಂದು ಮಾಜಿ ಮನಪಾ ಸದಸ್ಯ ಎ.ಸಿ ವಿನಯ್‌ರಾಜ್ ಪಶ್ನಿಸಿದರು.
ಕಾಂಕ್ರೀಟಿಕರಣಕ್ಕೆ ಆಗ್ರಹ :
ರಾಷ್ಟ್ರೀಯ ಹೆದ್ದಾರಿಯಲ್ಲಿ ಘನವಾಹನಗಳ ಸಂಚಾರದಿಂದಾಗಿ ರಸ್ತೆ ಹಾಳಾಗಿದೆ. ಆದುದರಿಂದ ಈ ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚಿದರೆ ಸಾಲದು. ಚಥುಷ್ಪಥ ರಸ್ತೆಯನ್ನು ಕಾಂಕ್ರೀಟಿಕರಣ ಗೊಳಿಸುವ ಮೂಲಕ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನಪಾ ಮಾಜಿ ವಿಪಕ್ಷ ನಾಯಕ ಅನಿಲ್ ಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಅಬ್ದುಲ್ ರವೂಫ್, ಭಾಸ್ಕರ್.ಕೆ, ಲ್ಯಾನ್ಸಿ ಲೋಟೊ ಪಿಂಟೊ, ಪ್ರಕಾಶ್ ಸಾಲಿಯಾನ್, ಸಂಶುದ್ದೀನ್ ಬಂದರ್, ಸಂಶುದ್ದೀನ್ ಕುದ್ರೊಳಿ, ಸುಹಾನ್ ಆಳ್ವ, ಅಶ್ರಫ್ ಬಜಾಲ್, ಕೇಶವ ಮರೋಳಿ, ಅಶೋಕ್ ಡಿ ಕೆ ಉಪಸ್ಥಿತರಿದ್ದರು.