×
Ad

ಸತ್ಯವಿದ್ದರೆ ಯಾರಿಗೂ ತಲೆಬಾಗಬೇಕಾಗಿಲ್ಲ: ವೀರಪ್ಪ ಮೊಯ್ಲಿ

‘ಲೋಕಗೆಂದಿನ ಗಾಂಧಿಯೆರ್’ ಕೃತಿ ಬಿಡುಗಡೆ

Update: 2025-10-04 19:34 IST

ಮಂಗಳೂರು, ಅ.4: ಮಹಾತ್ಮ ಗಾಂಧೀಜಿಯವರು ಲೋಕವನ್ನು ಗೆದ್ದಿದ್ದು ಅವರ ಸತ್ಯ ಹಾಗೂ ಅಹಿಂಸೆಯ ಬಲದಿಂದ‌, ನಮ್ಮ ಜತೆ ಸತ್ಯವಿದ್ದರೆ ಯಾರಿಗೂ ತಲೆ ಭಾಗಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಉದಯ ಕುಮಾರ್ ಇರ್ವತ್ತೂರು ಬರೆದಿರುವ ‘ಲೋಕಗೆಂದಿನ ಗಾಂಧಿಯೆರ್’ ಕೃತಿಯನ್ನು ಉರ್ವಸ್ಟೋರ್‌ನ ತುಳು ಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸತ್ಯ, ಧರ್ಮ, ಅಹಿಂಸೆಯಿಂದ ನಡೆದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಮಹಾತ್ಮ ಗಾಂಧಿ ಸಾಬೀತುಪಡಿಸಿದ್ದಾರೆ. ಗಾಂಧೀಜಿ ಎಂದೂ ಬತ್ತದ ಸತ್ಯದ ಗಣಿ. ಈ ಗಣಿಯ ಪ್ರಯೋಜನವನ್ನು ಇಂದಿನ ಯುವಜನತೆ ಪಡೆಯಬೇಕು ಎಂದು ಅವರು ಕರೆ ನೀಡಿದರು.

ಸತ್ಯ, ಅಹಿಂಸೆಯ ಶಕ್ತಿಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದು ಗಾಂಧೀಜಿ ಎಂಬ ಧೀಮಂತ ವ್ಯಕ್ತಿತ್ವ. ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿ ಅವರಿಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಗುರುಗಳಾಗಿದ್ದರು. ಗಾಂಧೀಜಿ ಅವರ ಬಗ್ಗೆ ತುಳುವಿನಲ್ಲಿ ಅಪೂರ್ವ ಪುಸ್ತಕ ಹೊರತರಲಾಗಿದೆ ಎಂದರು.

ತುಳು ಭಾಷೆ, ಸಾಹಿತ್ಯ, ಸಂಪ್ರದಾಯದ ಹಿಂದೆ ಅದ್ಭುತ ಸಂಸ್ಕೃತಿ ಇದೆ. ತುಳುನಾಡಿನಲ್ಲಿ ಶೋಷಣೆಗೆ ಒಳಗಾದ ಮನುಷ್ಯರೇ ದೈವಗಳಾಗಿದ್ದಾರೆ. ಶೋಷಣೆ ಮಾಡಿದವರು ಇದೇ ದೈವಗಳ ಆರಾಧಕರಾಗಿದ್ದಾರೆ. ದೈವಗಳಾದ ಬಳಿಕ ಆರಾಧನೆ ಮಾಡುವ ಬದಲಿಗೆ ಶೋಷಣೆ ಮಾಡುವಾಗಲೇ ಆಲೋಚಿಸಬೇಕು ಎಂದು ಹೇಳಿದ ಮೊಯ್ಲಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ಹಿಂದೂ ಹಾಗೂ ಮುಸ್ಲಿಂ ಕೋಮುವಾದಿಗಳ ದಳ್ಳುರಿ ಗಾಂಧೀಜಿಯ ಸ್ಥೈರ್ಯವನ್ನು ಕುಂದಿಸುವ ಪ್ರಯತ್ನ ನಡೆಸಿತ್ತು. ಆದರೆ ಅವರ ಧೈರ್ಯ, ಸತ್ಯ ಅಹಿಂಸೆ ಅವರ ಶಕ್ತಿಯಾಗಿತ್ತು. ಹಾಗಾಗಿ ಸ್ವಾತಂತ್ರ್ಯ ಎಂಬುದು ಬ್ರಿಟಿಷರು ಕೊಟ್ಟರು ನಾವು ತೆಗೆದುಕೊಂಡೆವು ಎಂಬಷ್ಟು ಸುಲಭವಲ್ಲ ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ತುಳು ಅಕಾಡೆಮಿ ವತಿಯಿಂದ ವಿವಿಧ ದಾರ್ಶನಿಕರಿಗೆ ಸಂಬಂಧಿಸಿದ ಪುಸ್ತಕಗಳನ್ನು ತುಳುವಿನಲ್ಲಿ ಪ್ರಕಟಿಸಲಾಗುತ್ತಿದೆ. ಮಾತೃಭಾಷೆ ತುಳು ಕೇಳಿದಾಗ, ಓದಿದಾಗ ವಿಚಾರಗಳು ಮನಸ್ಸಿಗೆ ಆಪ್ತವಾಗುತ್ತವೆ. ಈ ಹಿನ್ನೆಲೆಯಲ್ಲಿ ತುಳುವಿ ನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ತುಳು ಎರಡನೇ ಅಧಿಕೃತ ಭಾಷೆಯಾಗಿ ಜಾರಿಗೊಳ್ಳಲಿದೆ ಎಂದರು.

‘ಲೋಕಗೆಂದಿನ ಗಾಂಧಿಯೆರ್’ ಕೃತಿ ಬರೆದ ಡಾ. ಉದಯ ಕುಮಾರ್ ಇರ್ವತ್ತೂರು ಮಾತನಾಡಿ, ಗಾಂಧೀಜಿ ಇಂದಿಗೂ ಜಗತ್ತಿಗೆ ಪ್ರೇರಣೆಯಾಗಿದ್ದಾರೆ. ಗಾಂಧಿ ಹೇಳಿದಂತೆ ಜನತೆ ಬದುಕಿದ್ದರು, ಈಗಲೂ ಬದಕುವವರಿದ್ದಾರೆ. ಮಂಗಳೂರಿಗೆ ಮೂರು ಬಾರಿ ಆಗಮಿಸಿದ ಗಾಂಧಿ ಸ್ಪೂರ್ತಿಯ ಚಿಲುಮೆ ಎಂದರು.

ಕೃತಿ ಪರಿಚಯ ಮಾಡಿದ ಮಂಗಳೂರಿನ ಮಹಾತ್ಮ ಗಾಂಧಿ ವಿಚಾರ ವೇದಿಕೆ ಕಾರ್ಯದರ್ಶಿ ಡಾ.ಎನ್. ಇಸ್ಮಾಯಿಲ್, ಯುವಜನತೆಗೆ ಗಾಂಧೀಜಿ, ಅವರ ವ್ಯಕ್ತಿತ್ವದ ಬಗ್ಗೆ ಹಿರಿಯರು ಮಾಹಿತಿ ನೀಡಿಲ್ಲ. ಈ ಕೊರತೆ ನೀಗಿಸಲು ‘ಲೋಕಗೆಂದಿನ ಗಾಂಧಿಯೆರ್’ ಕೃತಿ ಸಹಾಯಕವಾಗಲಿದೆ ಎಂದರು.

ಕೈಮಗ್ಗ ಪುನರುತ್ಥಾನ ಪ್ರವರ್ತಕರಾದ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಸುಳ್ಯದ ಗಾಂಧಿ ಚಿಂತನ ವೇದಿಕೆ ಸಂಚಾಲಕ ಹರೀಶ್ ಬಂಟ್ವಾಳ, ದ.ಕ. ಜಿಲ್ಲಾ ಗಾಂಧಿ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಬೆಳುವಾಯಿ ಅತಿಥಿಗಳಾಗಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯ ಕ್ರಮ ನಿರೂಪಿಸಿದರು. ಸದಸ್ಯರಾದ ಉದ್ಯಾವರ ನಾಗೇಶ್, ಬೂಬ ಪೂಜಾರಿ, ಸಂತೋಷ್ ಶೆಟ್ಟಿ ಹಿರಿಯಡ್ಕ, ಬಾಬು ಪಾಂಗಾಳ ಉಪಸ್ಥಿತರಿದ್ದರು.

"ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂಬ ಕನಸು ಎಲ್ಲರಿಗೂ ಇದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೇ ಮೊದಲ ಹಾಗೂ ಕೊನೆಯ ಪ್ರಸ್ತಾವನೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಈ ಬಗ್ಗೆ ಕೇಂದ್ರ ಸರಕಾರ ವರದಿ ಪಡೆದುಕೊಂಡಿತ್ತು. ಕಳೆದ 14 ವರ್ಷಗಳಿಂದಲೂ ಆ ವರದಿ ಕೇಂದ್ರ ಸರಕಾರದ ಬಳಿ ಇದೆ. ಶೀಘ್ರದಲ್ಲಿ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲಿ".

-ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News